ದೇಶ

ಮಣಿಪುರ: ಪಕ್ಷದ ಹುದ್ದೆಗಳಿಗೆ 12 ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ

Lingaraj Badiger
ಇಂಫಾಲ್: ಲೋಕಸಭೆ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಣಿಪುರದಲ್ಲಿ 12 ಕಾಂಗ್ರೆಸ್ ಶಾಸಕರು ಪ್ರದೇಶ ಕಾಂಗ್ರೆಸ್ ಸಮಿತಿಯ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಈ 12 ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿವೆ. ಆದರೆ ಈ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕಾಂಗ್ರೆಸ್ ಅವರು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.
ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ ಶಾಸಕರಲ್ಲಿ ಒಬ್ಬರಾದ ಗೋವಿಂದಾಸ್ ಕೊಂಥೌಜಮ್ ಅವರು, ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ಶಾಸಕ, ಕೆ ರಂಜಿತ್ ಅವರು, ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕು ಎಂಬ ಗುರಿ ಇದ್ದು, ಅದಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ 12 ಶಾಸಕರಲ್ಲಿ ಯಾವ ಒಬ್ಬ ಶಾಸಕರೂ ಬಿಜೆಪಿ ಸೇರುವುದಿಲ್ಲ. ಅವರು ಕೇವಲ ಪದಾಧಿಕಾರಿಗಳ ಹುದ್ದೆಗೆ ರಾಜೀನಾಮೆ ನೀಡಿದ್ದು ಮುಂದೆ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ನಿಂಗೊಬಾಂ ಬುಪೇಂದ್ರ ಮೇಟಿಯಾ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನೈತಿಕ ಹೊಣೆಹೊತ್ತು ಹಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹುದ್ದೆ ತೊರೆಯುವುದಾಗಿ ಪಟ್ಟು ಹಿಡಿದಿದ್ದಾರೆ.
SCROLL FOR NEXT