ದೇಶ

ಮಗುವಿನ ಹೆಸರು 'ನರೇಂದ್ರ ಮೋದಿ' ಅಲ್ಲ ಮೊಹಮ್ಮದ್ ಅಲ್ತಾಫ್ ಆಲಂ ಮೋದಿ: ಮುಸ್ಲಿಂ ಮಹಿಳೆ ಯೂಟರ್ನ್

Lingaraj Badiger
ಲಖನೌ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೇ 23ರಂದು ಹುಟ್ಟಿದ ತನ್ನ ಮಗುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದ ಮುಸ್ಲಿಂ ಮಹಿಳೆ ಇದೀಗ ಯೂಟರ್ನ್ ಹೊಡೆದಿದ್ದು, ಮೊಹಮ್ಮದ್ ಅಲ್ತಾಫ್ ಆಲಂ ಮೋದಿ ಎಂದು ಬದಲಿಸಿದ್ದಾರೆ.
ತನ್ನ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ್ದ ಉತ್ತರಪ್ರದೇಶ ಗೊಂಡಾ ಜಿಲ್ಲೆಯ ಮುಸ್ಲಿಂ ಕುಟಂಬ, ತನ್ನ ಸಂಬಂಧಿಕರ ಒತ್ತಡಕ್ಕೆ ಮಣಿದು ಹೆಸರನ್ನು ಬದಲಾಯಿಸಿದೆ. 
ಹಿಂದು ಹೆಸರಿನ ಬದಲು ' ಮೊಹಮ್ಮದ್‌ ಅಲ್ತಾಫ್‌ ಆಲಂ ಮೋದಿ' ಎಂದು ತಾಯಿ ಮೆಹನಾಜ್‌ ಬೇಗಂ ಮಗುವಿನ ಹೆಸರನ್ನು ಬದಲಾಯಿಸಿದ್ದಾರೆ. 
ಹಿಂದು ಹೆಸರಿಟ್ಟ ಕಾರಣ ಕೆಲವು ಸಂಬಂಧಿಕರು ನಾಮಕರಣ ಕಾರ್ಯಕ್ರಮಕ್ಕೆ ಬರಲು ಹಿಂಜರಿದಿದ್ದರು. ಹಾಗಾಗಿ ಮಗು ದೊಡ್ಡವನಾದ ಮೇಲೆ ಅವನ ಹೆಸರಿನಿಂದಾಗಿ ಅವನಿಗೆ ಮತ್ತಷ್ಟು ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದೆ ಎಂದು ಬೇಗಂ ಹೇಳಿದ್ದಾರೆ. 
ಲೋಕಸಭಾ ಚುನಾವಣಾ ಫಲಿತಾಂಶದ ದಿನ ಮಗು ಜನಿಸಿತ್ತು ಎಂದು ಬೇಗಂ ಈ ಮುಂಚೆ ಹೇಳಿದ್ದರು. ಆದರೆ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಗು ಮೇ 12ರಂದು ಜನಿಸಿದೆ ಎಂದಿದ್ದಾರೆ. ಈ ಕುರಿತು ಕೂಡ ಈಗ ವಿವಾದ ಸೃಷ್ಟಿಯಾಗಿದೆ.
SCROLL FOR NEXT