ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಆಘಾತದಿಂದ ಹೊರ ಬರಲು ಯತ್ನಿಸುತ್ತಿದ್ದು, ತಮ್ಮ ಪ್ರೀತಿಯ ನಾಯಿ ಪಿಡಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಮಾಡುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
ದೆಹಲಿಯ ತುಘಲಕ್ ಮಾರ್ಗದಲ್ಲಿರುವ ತಮ್ಮ ನಿವಾಸದಿಂದ ರಾಹುಲ್ ಗಾಂಧಿ ಕಾರನ್ನು ಸ್ವತಃ ಚಲಾಯಿಸಿಕೊಂಡು ತೆರಳಿದ್ದು, ಹಿಂಬದಿಯ ಸೀಟಿನಲ್ಲಿ ಅವರ ಅಚ್ಚುಮೆಚ್ಚಿನ ನಾಯಿ 'ಪಿಡಿ' ಕುಳಿತುಕೊಂಡಿದೆ. ರಾಹುಲ್ ಮತ್ತು ಪಿಡಿ ಇಬ್ಬರೂ ಕ್ಯಾಮೆರಾಗೆ ಸೆರೆಯಾಗಿದ್ದು, ಈ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಅನೇಕ ಕಾಮೆಂಟ್ಗಳನ್ನು ಕೊಡುತ್ತಿದ್ದಾರೆ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು, 296 ಕಾಮೆಂಟ್ಗಳನ್ನು ಪಡೆದಿರುವ ಫೋಟೋ 413 ರೀಟ್ವೀಟ್ ಆಗಿದೆ.
ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಹೊರತುಪಡಿಸಿ, ಯಾರನ್ನೂ ಭೇಟಿಯಾಗುತ್ತಿಲ್ಲ. ಸಾರ್ವಜನಿವಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಿರುವಾಗ ರಾಷ್ಟ್ರೀಯ ಮಾಧ್ಯಮವೊಂದರ ಫೋಟೋಗ್ರಾಫರ್ ರಾಹುಲ್ ಗಾಂಧಿಯವರ ಫೋಟೋವೊಂದನ್ನು ಟ್ವೀಟ್ ಮಾಡಿದ್ದು ಸದ್ಯ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಾಹುಲ್ ಗಾಂಧಿ 2017ರಲ್ಲಿ ಈ ನಾಯಿಯನ್ನು ಟ್ವಿಟರ್ ಮೂಲಕವೇ ಸಾರ್ವಜನಿಕರಿಗೆ ಪರಿಚಯಿಸಿದ್ದರು. ಅದರ ಹೆಸರು ಪಿಡಿ ಎಂದು ಕೂಡ ಹೇಳಿಕೊಂಡಿದ್ದರು. ತಾವು ಪಿಡಿ ಮೂಗಿನ ಮೇಲೆ ಬಿಸ್ಕಿಟ್ ಇಟ್ಟು, ಚಿಟಿಕೆ ಹೊಡೆಯುತ್ತಿದ್ದಂತೆ ಅದನ್ನು ನಾಯಿ ತಿನ್ನುವ ಫನ್ನಿ ವಿಡಿಯೋವೊಂದನ್ನು ಷೇರ್ ಮಾಡಿಕೊಂಡಿದ್ದರು.