ದೇಶ

ಮೋದಿ ಸರ್ಕಾರದಲ್ಲಿ ಆರು ಮಹಿಳಾ ಸಚಿವರು

Srinivas Rao BV
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎರಡನೇ ಬಾರಿಯ ಎನ್‌ಡಿಎ ಸರ್ಕಾರದಲ್ಲಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮೋದಿ ಸರ್ಕಾರ, ಆರು ಮಂದಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಿದೆ.
ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ 2017ರಿಂದ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಈ ಹಿಂದೆ ಅವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು.
ಅನಾರೋಗ್ಯದ ಕಾರಣ ನೀಡಿ ಸಚಿವ ಸಂಪುಟ ಸೇರಲು ಅರುಣ್ ಜೇಟ್ಲಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ದೊರೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಕೊನೆಗೆ ಹಣಕಾಸು ಖಾತೆ ಪಡೆಯುವಲ್ಲಿ ನಿರ್ಮಲಾ ಸೀತಾರಾಮನ್ ಯಶಸ್ವಿಯಾಗಿದ್ದಾರೆ.
ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜವಳಿ ಖಾತೆ ನೀಡಲಾಗಿದೆ. ಅವರು ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಎರಡು ಬಾರಿ ಅವರು ರಾಜ್ಯಸಭೆ ಸದಸ್ಯರಾಗಿದ್ದರು.
ಹರ್‌ಸಿಮ್ರತ್ ಕೌರ್‌ ಬಾದಲ್ ಅವರು ತಮ್ಮ ಹಿಂದಿನ ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ ಪಡೆದಿದ್ದಾರೆ. ಅವರು ಪಂಜಾಬ್‌ನಲ್ಲಿ ಬಿಜೆಪಿಯ ಮಿತ್ರ ಪಕ್ಷ ಶಿರೋಮಣಿ ಅಖಾಲಿ ದಳದ ಸದಸ್ಯರಾಗಿದ್ದಾರೆ.
ಸಾಧ್ವಿ ನಿರಂಜನ್ ಜ್ಯೊತಿ, ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದ ಮತ್ತೊಬ್ಬ ಮಹಿಳೆ. ಅವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಕಳೆದ ಬಾರಿ 2014 ನವೆಂಬರ್‌ನಿಂದ ಅವರು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.
ರೇಣುಕಾ ಸಿಂಗ್ ಸರುತ ಅವರಿಗೆ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ದೇಬಶ್ರೀ ಚೌಧರಿ ಅವರು ಸಚಿವೆ ಸ್ಮೃತಿ ಇರಾನಿ ಅವರಿಗೆ ಸಹಾಯಕರಾಗಿದ್ದಾರೆ. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರಾಗಿ ಕೆಲಸ ನಿರ್ವಹಿಸಲಿದ್ದಾರೆ.    
SCROLL FOR NEXT