ದೇಶ

ಭಯ ಬಿಡಿ: ಬಿಲ್ ರಹಿತ ಚಿನ್ನ ಖರೀದಿ ಪತ್ತೆಗೆ ಯಾವ ಯೋಜನೆ ಇಲ್ಲ- ಕೇಂದ್ರ ಸ್ಪಷ್ಟನೆ

Manjula VN

ಚಿನ್ನ ಕ್ಷಮಾದಾನ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ: ಪ್ರಸ್ತಾವವೇ ಇಲ್ಲ ಎಂದ ಕೇಂದ್ರ


ನವದೆಹಲಿ: ಕಪ್ಪುಹಣದ ಮೂಲಕ ಖರೀದಿ ಮಾಡಿರುವ ಚಿನ್ನ ಪತ್ತೆಗಾಗಿ ಕೇಂದ್ರ ಸರ್ಕಾರ ಚಿನ್ನ ಕ್ಷಮಾದಾನ ಯೋಜನೆ ಜಾರಿಗೆ ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಇಂತಹ ಯಾವುದೇ ಪ್ರಸ್ತಾಪಗಳೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 

ಚಿನ್ನ ಕ್ಷಮಾದಾನದಂತಹ ಯಾವುದೇ ಯೋಜನೆ ಜಾರಿಗೊಳಿಸುವ ಪ್ರಸ್ತಾಪ ಆದಾಯ ತೋರಿಗೆ ಇಲಾಖೆ ಮುಂದಿಲ್ಲ. ಈಗಾಗಲೇ ಮುಂದಿನ ಬಜೆಟ್ ಸಿದ್ಧಪಡಿಸುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿಯ ಊಹಾಪೋಹ ಮತ್ತು ವದಂತಿಗಳು ಸುದ್ದಿಗಳಾಗುವುದು ಸಹಜ. ಆದರೆ, ಇಂತಹ ವರದಿಗಳ ಬಗ್ಗೆ ಜನ ಸಾಮಾನ್ಯರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ. 

ಸಾರ್ವಜನಿಕರು ತಮ್ಮ ಬಳಿ ಇರುವ ಬಿಲ್ ರಹಿತವಾದ ಚಿನ್ನವನ್ನು ಸ್ವಯಂಘೋಷಣೆ ಮಾಡಿಕೊಂಡು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಇಂತಹ ಚಿನ್ನಕ್ಕೆ ಸರ್ಕಾರ ತೆರಿಗೆ ಮತ್ತು ದಂಡ ವಿಧಿಸಿ ಸಕ್ರಮಕ್ಕೆ ಅವಕಾಶ ಮಾಡಿಕೊಂಡುತ್ತದೆ. ಹೀಗೆ ಘೋಷಿಸಿಕೊಂಡವರು ಮುಂದೆ ತನಿಖೆಯಿಂದ ಪಾರಾಗುತ್ತಾರೆ. ಘೋಷಿಸಿಕೊಳ್ಳದವರು. ಮುಂದೆ ಸಿಕ್ಕಿಬಿದ್ದರೆ ಅಘೋಷಿತ ಚಿನ್ನಕ್ಕೆ ಭಾರೀ ತೆರಿಗೆ, ದಂಡದ ಜೊತೆಗೆ ಶಿಕ್ಷೆಯನ್ನೂ ಎದುರಿಸಬೇಕಾಗಿ ಬರುತ್ತದೆ. ಕೇಂದ್ರ ವಿತ್ತ ಸಚಿವಾಲಯ ಹಾಗೂ ಕಂದಾಯ ಕಚಿವಾಲಯಗಳು ಜಂಟಿಯಾಗಿ ಈ ಚಿನ್ನ ಕ್ಷಮಾದಾನ ಯೋಜನೆ ಪ್ರಸ್ತಾಪ ಸಿದ್ಧಪಡಿಸಿದ್ದು, ಸಚಿವ ಸಂಪುಟ ಅನುಮೋದನೆಗೆ ಕಳುಹಿಸಿದೆ ಎಂಬ ವರದಿಗಳು ಕೇಳಿಬಂದಿದ್ದವು. ಇದು ಸಹಜವಾಗಿಯೇ ಭಾರಿ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸಿದ್ದವರಲ್ಲಿ ಆತಂಕ ಹುಟ್ಟಿಸಿತ್ತು. 

ವದಂತಿಗಳ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾಪಗಳನ್ನು ಸಿದ್ಧಪಡಿಸಿಲ್ಲ ಎಂದಿದೆ. 
 
ಭಾರತೀಯರು ಒಟ್ಟಾರೆ 20 ಸಾವಿರ ಟನ್ ಚಿನ್ನ ಹೊಂದಿದ್ದಾರೆಂಬ ಆಂದಾಜಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದಿರುವ ಹಾಗೂ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಚಿನ್ನವನ್ನು ಒಟ್ಟೂಗೂಡಿಸಿದರೆ, ಭಾರತೀಯರ ಬಳಿ 25,000-30,000 ಟನ್ ಚಿನ್ನವಿರಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. 

SCROLL FOR NEXT