ದೇಶ

ಪ್ರಧಾನಿ ಮೋದಿ ಅವರ ಬಲಿಷ್ಠ ನಾಯಕತ್ವ, ರಾಷ್ಟ್ರೀಯ ಹಿತಾಸಕ್ತಿಯಿಂದಲೇ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿಲ್ಲ: ಅಮಿತ್ ಶಾ

Vishwanath S

ನವದೆಹಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತದ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಎಲ್ಲಾ ಸಂದರ್ಭಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ದೃಢ ಸಂಕಲ್ಪದ ಪರಿಣಾಮ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ಆರ್‌ಸಿಇಪಿಗೆ ಸಹಿ ಹಾಕದಿರುವ ಭಾರತದ ನಿರ್ಧಾರವು ಪ್ರಧಾನಿಯವರ ಬಲವಾದ ನಾಯಕತ್ವ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಯನ್ನು ಖಾತರಿಪಡಿಸಿಕೊಳ್ಳುವ ದೃಢ ನಿಶ್ಚಯದ ಪರಿಣಾಮವಾಗಿದೆ. ಇದು ನಮ್ಮ ರೈತರು, ಸಣ್ಣ-ಮಧ್ಯಮ ಉದ್ಯಮಗಳು, ಹೈನುಗಾರಿಕೆ, ಉಕ್ಕು, ಔಷಧ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ ಎಂದು ಅಮಿತ್ ಶಾ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ. 

ನಮ್ಮ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಒಪ್ಪಂದದೊಂದಿಗೆ ಮುಂದುವರಿಯದಿರುವ ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿಲುವು  ಸ್ವಾಗತಾರ್ಹ. ಹಿಂದಿನ ದುರ್ಬಲ ಯುಪಿಎ ಸರ್ಕಾರ ವಾಣಿಜ್ಯ ಕುರಿತಂತೆ ಭಾರತದ  ಅಮೂಲ್ಯವಾದ ನೆಲೆಯನ್ನು ಬಿಟ್ಟುಕೊಟ್ಟಿತ್ತು ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ ಎಂದು ಅಮಿತ್‍ ಶಾ ಹೇಳಿದ್ದಾರೆ.

ದೇಶದ ಜನರ ಆತಂಕಗಳನ್ನು ಪರಿಹರಿಸಲು ಮಾತುಕತೆಗಳು ವಿಫಲವಾದರೆ ಆರ್‌ಸಿಇಪಿಗೆ ಸಹಿ ಹಾಕದಿರಲು ನಿರ್ಧರಿಸಲಾಗಿದೆ ಎಂದು ಭಾರತ ಎಂದು ಸೋಮವಾರ ಪ್ರಕಟಿಸಿತ್ತು.

ರಾಷ್ಟ್ರೀಯ ಹಿತದೃಷ್ಟಿಯಿಂದ ಆರ್‌ಸಿಇಪಿಗೆ ಸೇರದೆ ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ. ಭಾರತ, ಆರ್‌ಸಿಇಪಿಯಲ್ಲಿ ಒಳ್ಳೆಯ ನಂಬಿಕೆಯಿಂದ ಭಾಗವಹಿಸಿ ಸೂಕ್ತ ಮಾತುಕತೆ ನಡೆಸಿತು. ಬಗೆಹರಿಯದೇ ಉಳಿದ ವಿಷಯಗಳ ಬಗ್ಗೆ ಭಾರತ ಮಹತ್ವದ  ಹಿತಾಸಕ್ತಿ ಹೊಂದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT