ದೇಶ

ಮಹಾ ಕಗ್ಗಂಟು: ಶಿವಸೇನಾ ನಾಯಕರಿಂದ ಇಂದು ಸಂಜೆ ರಾಜ್ಯಪಾಲರ ಭೇಟಿ

Nagaraja AB

ಮುಂಬೈ:  ಮಹಾರಾಷ್ಟ್ರ ಸರ್ಕಾರ ರಚನೆ  ಬಿಕ್ಕಟ್ಟು ಮುಂದುವರೆದಿರುವಂತೆ ಶಿವಸೇನೆಯ ಹಿರಿಯ ಮುಖಂಡರು ಇಂದು ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಲಿದ್ದಾರೆ.

ಶಿವಸೇನಾ ಮುಖಂಡ ಸಂಜಯ್ ರಾವತ್ ಮತ್ತಿತರ ನಾಯಕರು ಇಂದು ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಮಹಾರಾಷ್ಟ್ರದ ರಾಜಭವನ ತಿಳಿಸಿದೆ. 

ರಾಜ್ಯಪಾಲರನ್ನು ಭೇಟಿ ಮಾಡಿ ಅತಿದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ಮನವಿ ಮಾಡಲಾಗುವುದು ಎಂದು ಸಂಜಯ್ ರಾವತ್ ಕೂಡಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ತಲಾ ಎರಡೂವರೆ ವರ್ಷಗಳ ಕಾಲ ಹಂಚಿಕೆ ಹಾಗೂ ಸಂಪುಟದಲ್ಲಿ ಸಮಾನ ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಶಿವಸೇನೆ ನಡುವೆ ವಾಕ್ ಸಮರ ಮುಂದುವರೆದಿರುವ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 

ಈ ಮಧ್ಯೆ ದೇವೇಂದ್ರ ಫಡ್ನವೀಸ್ ಅವರನ್ನೇ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕೆಂಬ ನಿಲುವಿಗೆ ಬಿಜೆಪಿ ಅಟ್ಟಿಕೊಂಡಿದ್ದರೆ, ಶಿವಸೇನೆ ಮುಖ್ಯಮಂತ್ರಿ ಹುದ್ದೆ ಉಭಯ ಪಕ್ಷಗಳ ನಡುವೆ ಹಂಚಿಕೆಯಾಗಬೇಕೆಂಬ ಪಟ್ಟವನ್ನು ಸಡಿಲಿಸುತ್ತಿಲ್ಲ.

ಚುನಾವಣೆ ನಂತರ ಇದೇ ಮೊದಲ ಬಾರಿಗೆ ಸಂಜಯ್ ರಾವತ್ ಸಂದೇಶ ಕಳುಹಿಸಿರುವುದಾಗಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ತಿಳಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ಶಿವಸೇನಾ 56  ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿದೆ.

SCROLL FOR NEXT