ದೇಶ

ಆರ್ ಎಸ್ ಎಸ್ ಮಧ್ಯ ಪ್ರವೇಶಿಸಬೇಕು: ಮೋಹನ್ ಭಾಗವತ್ ಗೆ ಪತ್ರ ಬರೆದ ಶಿವಸೇನಾ ಮುಖಂಡ

Nagaraja AB

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವೆ  ಸಮಾನ ಅಧಿಕಾರ ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ ಇದೀಗ ಆರ್ ಎಸ್ ಎಸ್ ಮಧ್ಯ ಪ್ರವೇಶಿಸುವಂತೆ ಶಿವಸೇನಾ ಮುಖಂಡರೊಬ್ಬರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನಿಕಟ ಸಂಪರ್ಕದಲ್ಲಿರುವ ಶಿವಸೇನಾ ಮುಖಂಡ ಕಿಶೋರ್ ತಿವಾರಿ ಈ ಪತ್ರ ಬರೆದಿದ್ದು, ಬಿಜೆಪಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮೋಹನ್ ಭಾಗವತ್  ಅವರನ್ನು ಒತ್ತಾಯಿಸಿದ್ದಾರೆ. 

ಬಿಜೆಪಿ - ಶಿವಸೇನಾ ಪರವಾಗಿ ಜನಾದೇಶ ನೀಡಲಾಗಿದೆ. ಆದರೆ, ಮೈತ್ರಿ ಧರ್ಮ ಪಾಲಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ರಚಿಸಲು ವಿಳಂಬ ಧೋರಣೆ ತಾಳಿದೆ. ಆದ್ದರಿಂದ ಆರ್ ಎಸ್ ಎಸ್ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದಾಗ್ಯೂ,ಆರ್ ಎಸ್ ಎಸ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಜೆಪಿ ಶಿವಸೇನಾ ಜೊತೆಗೆ ಮಾತುಕತೆಗೆ ಮುಂದಾಗಲಿದೆಯೇ? ಅಥವಾ ಬೇರೆ ಯಾವ ರೀತಿಯ ಧೋರಣೆ ತಾಳಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

SCROLL FOR NEXT