ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಹಗ್ಗ-ಜಗ್ಗಾಟ ಮುಂದುವರಿದಿದ್ದು, ಈ ಮಧ್ಯೆ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಅವರ ನಿಕಟವರ್ತಿ ರಾಹುಲ್ ಎನ್ ಕನಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇವರ ಆಶೀರ್ವಾದದಿಂದ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗುವುದನ್ನು ನಾವು ಕಣ್ತುಂಬಿಕೊಳ್ಳಬಹುದು. ದೇವರು ದೊಡ್ಡವನು, ನಮ್ಮ ನೆಚ್ಚಿನ ನಾಯಕನಿಗೆ ಮಹಾರಾಷ್ಟ್ರ ಜನತೆಯ ಸೇವೆ ಮಾಡುವ ಅವಕಾಶ ನೀಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ರಾಹುಲ್ ಶಿವಸೇನೆ ಯುವ ಘಟಕದ ಕೋರ್ ಸಮಿತಿ ಸದಸ್ಯರಾಗಿದ್ದಾರೆ.
ತಮ್ಮ ಟ್ವೀಟ್ ಪೋಸ್ಟ್ ನಲ್ಲಿ ಕನಲ್ ಆದಿತ್ಯ ಠಾಕ್ರೆ ಚಿಕ್ಕವರಿದ್ದಾಗಿನ ಭಾವಚಿತ್ರ ಮತ್ತು ಶಿವಸೇನೆ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆಯವರ ಫೋಟೋ ಹಾಕಿದ್ದಾರೆ. ಫೋಟೋದ ಕೆಳಗೆ ಮರಾಠಿಯಲ್ಲಿ, ಶಿವಾಜಿ ಪಾರ್ಕ್ ನಲ್ಲಿ ಧ್ವನಿಯೊಂದು ಕೇಳಿಬರಲಿದ್ದು, ನಾನು ಬಾಳಾ ಸಾಹೇಬ್ ಠಾಕ್ರೆಯವರ ಮೊಮ್ಮಗ ಎಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.
29 ವರ್ಷದ ಆದಿತ್ಯ ಠಾಕ್ರೆ, ಮುಂಬೈಯ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಎನ್ ಸಿಪಿಯ ಸುರೇಶ್ ಮನೆ ವಿರುದ್ಧ 67 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಶಿವಸೇನೆ ಪಾರ್ಟಿಯ ಇತಿಹಾಸದಲ್ಲಿ ಕುಟುಂಬದಿಂದ ಸ್ಪರ್ಧಿಸಿದ ಸದಸ್ಯರಲ್ಲಿ ಮೊದಲಿಗರು ಆದಿತ್ಯ ಠಾಕ್ರೆ.