ದೇಶ

'ಭಾರತದಲ್ಲಿನ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ-ಚೀನಾ ಕಾರಣ'!

Srinivas Rao BV

ಲಖನೌ: ಭಾರತದಲ್ಲಿ ಉಂಟಾಗಿರುವ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾ ಕಾರಣ ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ವಾಯುಗುಣಮಟ್ಟಕ್ಕೆ ಚೀನಾ ಹಾಗೂ ಪಾಕಿಸ್ತಾನವನ್ನು ದೂಷಿಸಬೇಕು. ಏಕೆಂದರೆ ಭಾರತದೆಡೆಗೆ ವಿಷ ಅನಿಲಗಳನ್ನು ಬಿಡುಗಡೆಗೆ ಮಾಡುತ್ತಿವೆ. ಇದರಿಂದಾಗಿ ರಾಷ್ಟ್ರರಾಜಧಾನಿಯಲ್ಲಿ ವಾಯುಗುಣಮಟ್ಟ ಹದಗೆಟ್ಟಿದೆ ಎಂದು ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಹೇಳಿದ್ದಾರೆ.

ಪಾಕಿಸ್ತಾನ ನಮ್ಮ ದೇಶದ ಮೇಲೆ ವಿಷ ಅನಿಲ ಪ್ರಯೋಗ ಮಾಡಿದೆಯೇ ಎಂಬುದನ್ನ ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಹ ಪಾಕಿಸ್ತಾನದ ಭಾರತ ದ್ವೇಷ ಹೆಚ್ಚಿದೆ. ಪ್ರತಿ ಬಾರಿ ಭಾರತದೊಂದಿಗೆ ಸೆಣೆಸಿದಾಗಲೂ ಪಾಕಿಸ್ತಾನ ಸೋತಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. 

ಇದೇ ವೇಳೆ ವಾಯುಗುಣಮಟ್ಟ ಕುಸಿಯುವುದಕ್ಕೆ ರೈತರು ಹಾಗೂ ಕೈಗಾರಿಕೋದ್ಯಮಿಗಳನ್ನು ದೂಷಿಸಬಾರದು ಎಂದು ಹೇಳಿರುವ ಅವರು, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಸೇರಿದಂತೆ ಬಹುತೇಕ ಜನರು ಕೈಗಾರಿಕೆ ಹಾಗೂ ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ ಆದರೆ ರೈತರು ನಮ್ಮ ದೇಶದ ಬೆನ್ನೆಲುಬು, ರೈತರು ಹಾಗೂ ಕೈಗಾರಿಕೆಗಳನ್ನು ದೂಷಿಸಬಾರದು ಎಂಬುದು ವಿನೀತ್ ಅಗರ್ವಾಲ್ ಶಾರ್ದ ಅಭಿಪ್ರಾಯ

SCROLL FOR NEXT