ದೇಶ

'ಮಹಾ' ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥರ ಪಾತ್ರವಿಲ್ಲ, ಸಿಎಂ ಆಗಿ ಫಡ್ನವೀಸ್ ಮುಂದುವರಿಕೆ: ಗಡ್ಕರಿ

Manjula VN

ನಾಗ್ಪುರ: ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾತ್ರವಿಲ್ಲ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮುಂದುವರೆಯಲಿದ್ದಾರೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರೇ ನೂತನ ಸರ್ಕಾರವನ್ನು ರಚನೆ ಮಾಡಲಿದ್ದಾರೆ. ಸರ್ಕಾರ ರಚನೆಯಲ್ಲಿ ಮೂಡಿರುವ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಎಳೆಯಲಾಗುತ್ತದೆ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆರ್'ಎಸ್ಎಸ್ ಮುಖ್ಯಸ್ಥ ನಂಟು ಸೂಕ್ತವಲ್ಲ. ರಾಜ್ಯದಲ್ಲಿ ಬಿಜೆಪಿ ಹಾಗೂ ಶಿವಸೇನೆಗೆ ಜನರು ಬೆಂಬಲ ನೀಡಿದ್ದಾರೆಂದು ತಿಳಿಸಿದ್ದಾರೆ. 

ನಿತಿನ್ ಗಡ್ಕರಿ ಹಾಗೂ ಮೋಹನ್ ಭಾಗವತ್ ಅವರು ಆರ್'ಎಸ್ಎಸ್ ಕಚೇರಿಯಲ್ಲಿಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿದ್ದವು. 

ಭೇಟಿ ವೇಳೆ ಗಡ್ಕರಿ ಹಾಗೂ ಭಗವತ್ ಇಬ್ಬರೂ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿತ್ತು. 

ಚುನಾವಣೆ ಫಲಿತಾಂಶ ಪ್ರಕಟವಾಗಿ 14 ದಿನವಾದರೂ ಸರ್ಕಾರ ರಚನೆಯಾಗದ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ವಿಧಾನಸಭೆ ಅಂತ್ಯದ ಅವಧಿಯಾದ ನವೆಂಬರ್ 8ರೊಳಗೆ ಸರ್ಕಾರ ರಚಿಸಲೇಬೇಕು ಎಂದು ಬಿಜೆಪಿ ಹಟ ತೊಟ್ಟಿದೆ. ಆದರೆ, ಶಿವಸೇನೆ ಮಾತ್ರ  ಮುಖ್ಯಮಂತ್ರಿ ಸ್ಥಾನದ ಜೊತೆಗೆ 50:50 ಗಾಗಿ ಪಟ್ಟು ಹಿಡಿದು ಕುಳಿತಿದೆ. 

ಒಂದೆಡೆ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಈ ಬಾರಿ ರಾಜ್ಯದ ಮುಖ್ಯಮಂತ್ರಿ ಶಿವಸೇನೆಯಿಂದಲೇ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ, ಗಡ್ಕರಿಯವರು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆಂದು ಹೇಳುತ್ತಿದ್ದಾರೆ. 

ಒಟ್ಟಾರೆ ಸಿಎಂ ಸ್ಥಾನ ಸೇರಿ ಅಧಿಕಾರದ 50:50 ಹಂಚಿಕೆಯ ಬಗ್ಗೆ ಇನ್ನೂ ಮಹಾರಾಷ್ಟ್ರ ರಾಜ್ಯದಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎಂದು ವಿಶ್ಲೇಷಿಸಬಹುದಾಗಿದೆ. 

SCROLL FOR NEXT