ದೇಶ

ಮಹಾ ರಾಜ್ಯಪಾಲರು ಸರ್ಕಾರ ರಚಿಸಲು ಏಕೈಕ ದೊಡ್ಡ ಪಕ್ಷಕ್ಕೆ ಏಕೆ ಆಹ್ವಾನ ನೀಡಲಿಲ್ಲ?: ಶರದ್ ಪವಾರ್

Lingaraj Badiger

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 15 ದಿನ ಕಳೆದರೂ ನೂತನ ಸರ್ಕಾರ ರಚನೆಯ ಬಿಕ್ಕಟ್ಟು ಮುಂದುವರೆದಿದ್ದು, ರಾಜ್ಯಪಾಲರು ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಏಕೆ ಆಹ್ವಾನ ನೀಡಲಿಲ್ಲ? ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪ್ರಶ್ನಿಸಿದ್ದಾರೆ.

ಕಳೆದ ಅಕ್ಟೋಬರ್ 21ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಸರ್ಕಾರ ರಚಿಸಲು ಬಿಜೆಪಿ ಆಹ್ವಾನ ನೀಡಬೇಕಿತ್ತು. ಆದರೆ ಏಕೆ ಆಹ್ವಾನ ನೀಡಲಿಲ್ಲ ಎಂಬುದು ನಮಗೆ ಗೊತ್ತಿಲ್ಲ ಎಂದು ಶರದ್ ಪಾವರ್ ಹೇಳಿದ್ದಾರೆ.

ಇಂದು ಕೇಂದ್ರ ಸಚಿವ ರಾಮದಾಸ್ ಅಥವಾಳೆ ಅವರು ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಹಾ ಸರ್ಕಾರ ರಚನೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ  ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ಜನ ಬಿಜೆಪಿ-ಶಿವಸೇನಾ ಪರ ತೀರ್ಪು ನೀಡಿದ್ದು, ಅದನ್ನು ಅವರು ಗೌರವಿಸಬೇಕು ಮತ್ತು ಅಥವಾಳೆ ಅವರ ಮೂಲಕ ಸಮಸ್ಯೆ ಪರಿಹರಿಸುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.

ಬಿಜೆಪಿ ಮತ್ತು ಶಿವಸೇನೆ ಮೈತ್ರಿಯೂ ಸರ್ಕಾರ ರಚನೆಗೆ ಬೇಕಾಗಿರುವ ಬಹುಮತವನ್ನು ಪಡೆದಿದ್ದರೂ ಶಿವಸೇನೆ ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಬೇಡಿಕೆ ಇಟ್ಟಿದೆ. ಆದರೆ, ಸಿಎಂ ಸ್ಥಾನವನ್ನು ಸುತಾರಾಂ ಬಿಟ್ಟುಕೊಡುವುದಿಲ್ಲ ಎಂದು ಬಿಜೆಪಿ ಪಟ್ಟುಹಿಡಿದಿರುವುದರಿಂದ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿದೆ. ಇನ್ನು ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಕೂಡ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

SCROLL FOR NEXT