ದೇಶ

ಅಯೋಧ್ಯೆ ತೀರ್ಪಿನ ಲಾಭ ಮೋದಿ ಸರ್ಕಾರ ಪಡೆಯುವಂತಿಲ್ಲ: ಶಿವಸೇನೆ

Manjula VN

ಮುಂಬೈ: ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ತೀರ್ಪಿನ ಲಾಭವನ್ನು ಮೋದಿ ಸರ್ಕಾರ ಪಡೆಯುವಂತಿಲ್ಲ ಎಂದು ಶಿವಸೇನೆ ಶುಕ್ರವಾರ ಹೇಳಿದೆ. 

ವಿವಾದ ಸಂಬಂಧ ಸುಪ್ರೀಂಕೋರ್ಟ್ ಶನಿವಾರ ತೀರ್ಪು ನೀಡಲಿದೆ. ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಹಲವು ವರ್ಷಗಳಿಂದಲೂ ಶಿವಸೇನೆ ಆಗ್ರಹಿಸುತ್ತಲೇ ಇತ್ತು. ಆದರೂ ಮೋದಿ ಸರ್ಕಾರ ಅಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಹೀಗಾಗಿ ಮೋದಿ ಸರ್ಕಾರ ವಿವಾದ ಸಂಬಂಧದ ತೀರ್ಪಿನ ಲಾಭವನ್ನು ಪಡೆಯಬಾರದು ಎಂದು ಶಿವಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಅಯೋಧ್ಯೆ ಭೂ ವಿವಾದ ಸಂಬಂಧ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು. ಅದರಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ, ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠ ಶನಿವಾರ ತನ್ನ ತೀರ್ಪು ಪ್ರಕಟಿಸಲಿದೆ. 

SCROLL FOR NEXT