ದೇಶ

'ಮಹಾ'ಸರ್ಕಾರ ರಚನೆ ಕಗ್ಗಂಟು: ದೇವೇಂದ್ರ ಫಡ್ನವಿಸ್ ಉಸ್ತುವಾರಿ ಮುಖ್ಯಮಂತ್ರಿ, ಗುಟ್ಟುಬಿಡದ ಶಿವಸೇನೆ 

Sumana Upadhyaya

ಮುಂಬೈ: ದಿನವಿಡೀ ರಾಜಕೀಯ ನಾಟಕ ನಡೆದ ನಂತರ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಿವಸೇನೆ ಇನ್ನೂ ತನ್ನ ಹಠವನ್ನು ಬಿಡದಿರುವುದರಿಂದ ಫಡ್ನವಿಸ್ ಉಸ್ತುವಾರಿ ಮುಖ್ಯಮಂತ್ರಿಯಾಗಿರುತ್ತಾರೆ.


ಮೈತ್ರಿ ಇಲ್ಲಿಗೇ ಕೊನೆಗೊಳ್ಳುವುದಿಲ್ಲ ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದರೂ ಕೂಡ ಸಿಎಂ ಹುದ್ದೆಯ ವಿವಾದ ಬಗೆಹರಿದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಈಗ ಸಂದಿಗ್ಧ ಪರಿಸ್ಥಿತಿಗೆ ತಲುಪಿದ್ದು ಈ ಕ್ಷಣದಲ್ಲಿ ಯಾವುದೇ ಪಕ್ಷಗಳು ತಮ್ಮ ಆಯ್ಕೆಯನ್ನು ಬಹಿರಂಗಪಡಿಸುತ್ತಿಲ್ಲ.


ತಮ್ಮ ನಡುವಿನ ಸಂಬಂಧ ಹದಗೆಟ್ಟ ಬಗ್ಗೆ ಮತ್ತು ಮಾತುಕತೆಯಲ್ಲಿ ಯಾವುದೇ ಸಹಮತ ಬಂದಿಲ್ಲ ಎಂಬುದು ನಿನ್ನೆ ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವಿಸ್ ನಡೆಸಿದ ಸುದ್ದಿಗೋಷ್ಠಿಯಿಂದ ತಿಳಿದುಬಂದಿದೆ. 


ಈ ಮಧ್ಯೆ ಶಿವಸೇನೆಯ ಶಾಸಕರನ್ನು ಬಾಂದ್ರಾದ ಹೊಟೇಲ್ ನಿಂದ ಮಲಾಡ್ ನ ದೊಡ್ಡ ಹೊಟೇಲ್ ಗೆ ವರ್ಗಾಯಿಸಲಾಗಿದ್ದು ತಮ್ಮ ಶಾಸಕರಿಗೆ ಸಾಕಷ್ಟು ಭದ್ರತೆ ನೀಡುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.


ರಾಜ್ಯಪಾಲ ಕೊಶ್ಯಾರಿ ಸರ್ಕಾರ ರಚನೆ ಬಗ್ಗೆ ಕಾನೂನು ಸಲಹೆ ಪಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಎನ್ ಸಿಪಿ ಕೂಡ ಸರ್ಕಾರ ರಚನೆಯ ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿವೆ. 

SCROLL FOR NEXT