ದೇಶ

ಬಂಗಾಳದಲ್ಲಿ ಬುಲ್ ಬುಲ್ ಚಂಡಮಾರುತದ ಅಬ್ಬರ; 10 ಮಂದಿ ಬಲಿ

Srinivasamurthy VN

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೀವ್ರ ಭೀತಿ ಸೃಷ್ಟಿಸಿರುವ ಬುಲ್ ಬುಲ್ ಚಂಡಮಾರುತದ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಮಧ್ಯರಾತ್ರಿ ಬಂಗಾಳದ ಸಾಗಾರ ದ್ವೀಪಗಳು ಮತ್ತು ಬಾಂಗ್ಲಾದೇಶದ ಖೇಪುಪುರ ಕರಾವಳಿ ಪ್ರಾಂತ್ಯಕ್ಕೆ ಬುಲ್ ಬುಲ್ ಚಂಡಮಾರುತ ಅಬ್ಬಳಿಸಿದ್ದು, ಚಂಡಮಾರುತದ ಅಬ್ಬರಕ್ಕೆ ಈ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಇನ್ನು ಚಂಡಮಾರುತದ ಅಬ್ಬರಕ್ಕೆ ಈ ವರೆಗೂ ಬಂಗಾಳದಲ್ಲಿ 10 ಮಂದಿ ಬಲಿಯಾಗಿದ್ದು, ನಿನ್ನೆ ಸುಂದರಬನ್ ಒಂದರಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಅನ್ವಯ ಪ್ರಸ್ತುತ ಅಪ್ಪಳಿಸಿರುವ ಬುಲ್ ಬುಲ್ ಚಂಡಮಾರುತ ಪ್ರತೀ ಗಂಟೆಗೆ 120 ರಿಂದ 135 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ. ಇನ್ನು ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು ಚಂಡಮಾರುತದ ಅಬ್ಬರಕ್ಕೆ ತತ್ತರಿಸಿ ಹೋಗಿದ್ದು, ನೂರಾರು ಮರಗಳು ಧರೆಗುರುಳಿವೆ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ರಕ್ಷಣಾ ಕಾರ್ಯಾದಲ್ಲಿ ತೊಡಗಿದ್ದಾರೆ.

ಬುಲ್ ಬುಲ್ ಹೊಡೆತಕ್ಕೆ 2.73 ಲಕ್ಷ ಮಂದಿ ನಿರಾಶ್ರಿತರು
ಇನ್ನು ಬುಲ್ ಬುಲ್ ಚಂಡಮಾರುತದಿಂದಾಗಿ ಇಲ್ಲಿನ ನೂರಾರು ಗ್ರಾಮಗಳಲ್ಲಿ ತೊಂದರೆಯಾಗಿದ್ದು, ಸಾವಿರಾರು ಮನೆಗಳು ಕುಸಿದಿವೆ. ಪರಿಣಾಮ ಬಂಗಾಳದ ಸುಮಾರು 2.73 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. 1.78 ಲಕ್ಷ ಮಂದಿ ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ.  ಕನಿಷ್ಠ 2,473 ಮನೆಗಳು ದ್ವಂಸಗೊಂಡಿದ್ದು, 26,000 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, 10 ಸಾವಿರಕ್ಕೂ ಅಧಿಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

SCROLL FOR NEXT