ದೇಶ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತ ಬರುತ್ತಾ? ರಾಜ್ಯಪಾಲರಿಂದ ಡೆಡ್ ಲೈನ್!?

Srinivas Rao BV

ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಪ್ರಹಸನ ಕ್ಷಣ ಕ್ಷಣಕ್ಕೂ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದು, ಸರ್ಕಾರ ರಚನೆಗೆ ಯಾರಿಂದಲೂ ಹಕ್ಕು ಮಂಡನೆಯಾಗದ ಸ್ಥಿತಿ ನಿರ್ಮಾಣವಾಗಿ ರಾಷ್ಟ್ರಪತಿಗಳ ಆಡಳಿತಕ್ಕೆ ಭೂಮಿಕೆ ಸಿದ್ಧವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ. 

ಸ್ಪಷ್ಟ ಬಹುಮತ ಇಲ್ಲದ ಕಾರಣ ಸರ್ಕಾರ ರಚನೆಯ ಪ್ರಕ್ರಿಯೆಯಿಂದ ಹೊರಗುಳಿಯುವುದಾಗಿ ಬಿಜೆಪಿ ಸ್ಪಷ್ಟನೆ ನೀಡಿದ್ದ ಬಳಿಕ ಮಾಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಶಿವಸೇನೆಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಅಷ್ಟೇ ಅಲ್ಲದೇ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಪತ್ರವನ್ನು 24 ಗಂಟೆಗಳಲ್ಲಿ ತಲುಪಿಸಬೇಕೆಂದೂ ಹೇಳಿದ್ದರು. 

ಈ ಅವಧಿಯಲ್ಲಿ ಶಿವಸೇನೆ ಎನ್ ಸಿಪಿ-ಕಾಂಗ್ರೆಸ್ ಜೊತೆ ಬೆಂಬಲಕ್ಕಾಗಿ ಮಾತುಕತೆಯಲ್ಲಿ ತೊಡಗಿತ್ತು, ಹಾಗೂ ಹೀಗೂ ಎನ್ ಸಿಪಿ ವಿಧಿಸಿದ್ದ ಷರತ್ತುಗಳನ್ನು ಒಪ್ಪಿಕೊಂಡು ಸರ್ಕಾರ ರಚನೆಗೆ ಉತ್ಸುಕವಾಗಿದ್ದ ಶಿವಸೇನೆಗೆ ಕಾಂಗ್ರೆಸ್ ನ ಬೆಂಬಲದ ಬಗ್ಗೆ ಕೊನೆ ಕ್ಷಣದ ವರೆಗೂ ಸ್ಪಷ್ಟ, ಅಧಿಕೃತ ಘೋಷಣೆ ಸಿಗಲಿಲ್ಲ. ಪರಿಣಾಮ ರಾಜ್ಯಪಾಲರ ಭೇಟಿ ವೇಳೆ ಸರ್ಕಾರ ರಚನೆ ಹಕ್ಕು ಮಂಡಿಸಲು ನಮಗೆ ಮತ್ತಷ್ಟು ಕಾಲಾವಕಾಶ ಬೇಕೆಂದು ಶಿವಸೇನೆ ನಾಯಕರು ಕೋರಿದ್ದರು. ಆದರೆ ಶಿವಸೇನೆಯ ಬೇಡಿಕೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ಬೆನ್ನಲ್ಲೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ರಾಜ್ಯಪಾಲರು ಎನ್ ಸಿಪಿಗೆ ಸರ್ಕಾರ ರಚನೆ ಮಾಡುವುದಕ್ಕೆ ಆಹ್ವಾನ ನೀಡಿದ್ದಾರೆ. ಎನ್ ಸಿಪಿ ಸರ್ಕಾರ ರಚನೆ ಮಾಡಬೇಕಾದರೆ ಶಿವಸೇನೆ ಹಾಗೂ ಕಾಂಗ್ರೆಸ್ ಬೆಂಬಲ ಅನಿವಾರ್ಯ ಆದರೆ ಶಿವಸೇನೆಗೆ ಬೆಂಬಲ ನೀಡುವ ಸಂಬಂಧ ಕಾಂಗ್ರೆಸ್ ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯಪಾಲರು ಎನ್ ಸಿಪಿಗೆ ನೀಡಿರುವ ಗಡುವು ದಾಟಿದರೆ ಮಹಾರಾಷ್ಟ್ರದಲ್ಲಿ ಯಾರೊಬ್ಬರೂ ಸದ್ಯಕ್ಕೆ ಸರ್ಕಾರ ರಚನೆ ಹಕ್ಕು ಮಂಡಿಸದೇ, ಹಾಲಿ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿಗಳ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸು ಮಾಡಬಹುದಾಗಿದೆ. 

SCROLL FOR NEXT