ದೇಶ

ಸೈದ್ಧಾಂತಿಕ ಭಿನ್ನತೆಯಿಂದ ಶಿವಸೇನೆಗೆ ಸೋನಿಯಾ ಬೆಂಬಲ ನೀಡಿರಲಿಲ್ಲ: ಮೂಲಗಳು

Manjula VN

ನವದೆಹಲಿ: ಶಿವಸೇನೆ ಹಾಗೂ ತಮ್ಮ ನಡುವೆ ಇರುವ ಸೈದ್ಧಾಂತಿಕ ಭಿನ್ನತೆಗಳಿಂದಾಗಿ ಸರ್ಕಾರ ರಚಿಸುವಲ್ಲಿ ಶಿವಸೇನೆಗೆ ಬೆಂಬಲ ನೀಡಲು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರು ಹಿಂದೆ ಸರಿದಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 

ಮಹಾರಾಷ್ಟ್ರ ರಾಜ್ಯದಲ್ಲಿ 50:50 ಒಪ್ಪಂದಕ್ಕೆ ಒಪ್ಪದ ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಶಿವಸೇನೆ ಬಿಜೆಪಿಗೆ ಸವಾಲು ಹಾಕಿ, ಕಾಂಗ್ರೆಸ್-ಎನ್'ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್-ಎನ್'ಸಿಪಿ ಬೆಂಬಲ ಸಾಬೀತುಪಡಿಸುವಲ್ಲಿ ವಿಫಲಗೊಂಡಿತ್ತು. 

ಎನ್'ಸಿಪಿ ಜೊತೆಗೆ ಮತ್ತಷ್ಟು ಚರ್ಚೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸೋನಿಯಾ ಗಾಂಧಿ ಹೇಳಿದ್ದರು. ಈ ಮೂಲಕ ಶಿವಸೇನೆಗೆ ಬೆಂಬಲ ನೀಡಲು ಹಿಂದೇಟು ಹಾಕಿದ್ದರು. 

ಇದೀಗ ಸೋನಿಯಾ ಅವರ ಹಿಂಜರಿಕೆಗೆ ಎರಡೂ ಪಕ್ಷಗಳ ನಡುವೆ ಇರುವ ಸೈದ್ಧಾಂತಿಕ ವ್ಯತ್ಯಾಸಗಳೇ ಕಾರಣ ಎಂದು ಮೂಲಗಳು ತಿಳಿಸಿವೆ. 

ಈ ನಡುವೆ ಶಿವಸೇನೆ ಜೊತೆಗೆ ಕೈಜೋಡಿಸಿ ಸರ್ಕಾರ ರಚಿಸುವಂತೆ ಹಲವು ನಾಯಕರು ಸೋನಿಯಾ ಗಾಂಧಿಯವರ ಮೇಲೆ ಒತ್ತಡ ಹೇರುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸೋನಿಯಾ ಅವರೇ ಹಿಂದೇಟು ಹಾಕುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಶರದ್ ಪವಾರ್ ಅವರು ಅಹ್ಮದ್ ಪಟೇಲ್ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದಾರೆ. ಶಿವಸೇನೆ ಜೊತೆಗೆ ಕೈಜೋಡಿಸುವಂತೆ ಶಾಸಕರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯಲು ಪವರ್ ಅವರೇ ಕಾರಣ ಎಂದು ಮೂಲಗಳು ತಿಳಿಸಿವೆ. 

ಮಹಾರಾಷ್ಟ್ರದ ಹಿರಿಯ ನಾಯಕರಾದ ಅಶೋಕ್ ಚವಣ್, ಪೃಥ್ವಿರಾಜ್ ಚೌಹಾಣ್, ಪಿಸಿಸಿ ಮುಖ್ಯಸ್ಥ ಬಾಳಸಾಹೇಬ್ ಥೊರಾಟ್ ಅವರು ಶಿವಸೇನೆ-ಎನ್'ಸಿಪಿಗೆ ಬೆಂಬಲ ನೀಡಿದ್ದು, ಇದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. 

SCROLL FOR NEXT