ದೇಶ

'ಮಹಾ' ಸರ್ಕಾರದಲ್ಲಿ ಮುಂದುವರೆದ ಹೈಡ್ರಾಮಾ: ಸರ್ಕಾರ ರಚಿಸುವಲ್ಲಿ ಶಿವಸೇನೆ ಫೇಲ್, ಎನ್'ಸಿಪಿಗೆ ಆಫರ್

Manjula VN

ಮುಂಬೈ: ಮಹಾರಾಷ್ಟ್ರದಲ್ಲಿ ಇನ್ನೇನು ಶಿವಸೇನೆ-ಎನ್'ಸಿಪಿ ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿರುವ ಶಿವಸೇನೆ, ಸರ್ಕಾರ ರಚಿನೆಗೆ ಆಸಕ್ತಿ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿತಾದರೂ, ಎನ್'ಸಿಪಿ-ಕಾಂಗ್ರೆಸ್ ಬೆಂಬಲದ ಪತ್ರ ಸಲ್ಲಿಸಲು ವಿಫಲಾಗಿದೆ. ಮತ್ತೊಂದೆಡೆ ಬೆಂಬಲ ಪತ್ರ ಸಲ್ಲಿಸಲು ಕಾಲಾವಾಶ ನೀಡಲು ರಾಜ್ಯಾಪಾಲರು ನಿರಾಕರಿಸಿದ್ದು, ಸರ್ಕಾರ ರಚನೆಯ ಭಾರೀ ಕನಸು ಕಂಡಿದ್ದ ಶಿವಸೇನೆಗೆ ಮುಖಭಂಗವಾಗಿದೆ. 

ಇದರ ಬೆನ್ನಲ್ಲೇ ರಾಜ್ಯಪಾಲ ಕೋಶಿಯಾರಿ ಅವರು, 3ನೇ ಅತಿ ದೊಡ್ಡ ಪಕ್ಷವಾಗಿರುವ ಶರದ್ ಪವಾರ್ ಅವರ ಎನ್'ಸಿಪಿ ಪಕ್ಷಕ್ಕೆ ಆಹ್ವಾನ ನೀಡಿದ್ದು, ಮಂಗಳವಾರ ರಾತ್ರಿ 8.30ರೊಳಗೆ ಈ ಕುರಿತು ಹಕ್ಕು ಮಂಡಿಸುವಂತೆ ಗಡುವು ನೀಡಿದ್ದಾರೆ. 

ಮಂಗಳವಾರ ಎನ್'ಸಿಪಿ ನಾಯಕರ ಜೊತೆ ಕಾಂಗ್ರೆಸ್ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ಅಲ್ಲಿ ಸರ್ಕಾರ ರಚನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಪ್ರಖರ ಹಿಂದುತ್ವವಾದ ಕೈಬಿಡಬೇಕು. ಎನ್'ಡಿಎ ಮೈತ್ರಿಕೂಡದಿಂದ ಪೂರ್ಣ ಹೊರಕ್ಕೆ ಬರಬೇಕು. ಕಾಂಗ್ರೆಸ್-ಎನ್'ಸಿಪಿ ಸಿದ್ಧಾಂತಗಳಿಗೆ ಪೆಟ್ಟು ನೀಡುವ ಯಾವುದೇ ಹೇಳಿಕೆ, ನಿರ್ಧಾರ ತೆಗೆದುಕೊಳ್ಳಬಾರದು ಎಂಬ ತಮ್ಮ ಬೇಡಿಕೆಗೆ ಶಿವಸೇನೆ ಒಪ್ಪಿದ್ದೇ ಆದಲ್ಲಿ ಸರ್ಕಾರ ಬೆಂಬಲಿಸಲು ಕಾಂಗ್ರೆಸ್-ಎನ್'ಸಿಪಿ ಒಪ್ಪಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮಂಗಳವಾರದ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಇನ್ನು ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಮುಖ್ಯವಾಗಿರುವ ಕಾಂಗ್ರೆಸ್, ಸೋಮವಾರ ಯಾವುದೇ ನಿರ್ಧಾರ ಕೈಗೊಳ್ಳಲು ವಿಫಲವಾಯಿತು. ಹೊಸ ಸಂಭಾವ್ಯ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಪಕ್ಷದ ಹಲವು ಹಿರಿಯ ನಾಯಕರು ಮತ್ತು ಮಹಾರಾಷ್ಟ್ರದ ನಾಯಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸುದೀರ್ಘ ಸಮಾಲೋಜನೆ ನಡೆಸಿದರಾದರೂ, ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸಲಿಲ್ಲ. 

SCROLL FOR NEXT