ದೇಶ

'ಮಹಾ'ರಾಜಕೀಯ: ಬಿಜೆಪಿ ವಿಕೃತ ಸಂತೋಷ ಕಾಣುತ್ತಿದೆ ಎಂದು ಆರೋಪಿಸಿದ ಶಿವಸೇನೆ 

Sumana Upadhyaya

ಮುಂಬೈ: ಮೈತ್ರಿ ಮುರಿದುಕೊಂಡು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರವೂ ಭಾರತೀಯ ಜನತಾ ಪಾರ್ಟಿಯ ಮೇಲೆ ಶಿವಸೇನೆ ವಾಗ್ದಾಳಿ ನಿಲ್ಲಿಸಿಲ್ಲ. ಮಹಾರಾಷ್ಟ್ರದಲ್ಲಿ ಬೇರೆ ಪಕ್ಷಗಳು ಸರ್ಕಾರ ರಚಿಸಲು ಕಷ್ಟಪಡುತ್ತಿರುವಾಗ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷ ಮಾತ್ರ ಇನ್ನೊಬ್ಬರಿಗೆ ನೋವು ಕೊಟ್ಟು ಒಗಿಂದೊಳಗೆ ಖುಷಿಯನ್ನು ಅನುಭವಿಸುತ್ತಿದೆ ಎಂದು ನೇರವಾಗಿ ಬಿಜೆಪಿಯ ಹೆಸರು ಹೇಳದೆ ತಿರುಗೇಟು ನೀಡಿದೆ.


ಈ ಕುರಿತು ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ, ರಾಜಕೀಯದಲ್ಲಿ ನೈತಿಕತೆ ಬಗ್ಗೆ ಮಾತನಾಡುವವರೇ ಇಂದು ಅಡ್ಡಿಪಡಿಸುತ್ತಿದ್ದಾರೆ. 105 ಶಾಸಕರನ್ನು ಹೊಂದಿರುವ ಪಕ್ಷ ಸರ್ಕಾರ ರಚಿಸಲು ಸಾಧ್ಯವಾಗದಿದ್ದಾಗ ಬೇರೆ ಪಕ್ಷಗಳು ಖಂಡಿತವಾಗಿಯೂ ಹೋರಾಟ ನಡೆಸುವುದು ಸಹಜ. ಹಾಗೆಂದ ಮಾತ್ರಕ್ಕೆ ಬಹುಮತ ಹೊಂದಿದ ಪಕ್ಷ ಖುಷಿಯಿಂದ ಹಿಗ್ಗಬೇಕೆಂದಲ್ಲ. ಇನ್ನೊಬ್ಬರಿಗೆ ನೋವನ್ನುಂಟುಮಾಡಿ ಸಂತೋಷಪಡುವ ಮನೋಭಾವದಿಂದಾಗಿ ಮಹಾರಾಷ್ಟ್ರ ಇಂದು ಈ ಪರಿಸ್ಥಿತಿಗೆ ತಲುಪಿದೆ ಎಂದು ಸಾಮ್ನಾದಲ್ಲಿ ಶಿವಸೇನೆ ಬರೆದುಕೊಂಡಿದ್ದಾರೆ.


ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆ ಮಾಡಲು 15 ದಿವಸ ಕಾಲಾವಕಾಶ ಕೊಟ್ಟರೆ, ತಮಗೆ ಕೇವಲ 24 ಗಂಟೆ ನೀಡಿದೆಯಷ್ಟೆ, ಕೆಲವು ಶಾಸಕರು ರಾಜ್ಯದಿಂದ ಹೊರಗಿದ್ದಾರೆ, ಅಂತವರ ಸಹಿ ಹೇಗೆ ತಕ್ಷಣಕ್ಕೆ ಪಡೆಯಲು ಸಾಧ್ಯ, ರಾಜ್ಯದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಂತೆ ಎಂದು ಆರೋಪಿಸಿದೆ.


ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಮನ್ವಯ ಹೊಂದಲು ಕಾಲಾವಕಾಶ ಬೇಕು ಎಂದು ಸ್ಪಷ್ಟವಾಗಿರುವಾಗ ರಾಜಭವನ ಕೇವಲ 24 ಗಂಟೆ ನೀಡಿತು. ಅಷ್ಟರೊಳಗೆ ಸರ್ಕಾರ ರಚನೆಯಾಗದಿದ್ದಾಗ ಬಿಜೆಪಿ ಖುಷಿಯಿಂದ ಹಿಗ್ಗಿದೆ, ಪ್ರಜಾಪ್ರಭುತ್ವದಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದೆ.

SCROLL FOR NEXT