ದೇಶ

ಐಐಟಿ ಮದ್ರಾಸ್ ನಲ್ಲಿ ವಿದ್ಯಾರ್ಥಿನಿ ಸಾವು; ಹಲವರು ಪ್ರೊಫೆಸರ್ ಮೇಲೆ ಅಸಮಾಧಾನ ಹೊಂದಿದ್ದರು: ಫಾತಿಮಾಳ ಸೋದರಿ 

Sumana Upadhyaya

ಕೊಲ್ಲಂ: ಫಾತಿಮಾ ಲತೀಫ್ ಆತ್ಮಹತ್ಯೆಯ ನಂತರ ಬೇರೆ ವಿದ್ಯಾರ್ಥಿಗಳು ಕೂಡ ನಮಗೆ ಕರೆ ಮಾಡಿ ಶಿಕ್ಷಣ ಸಂಸ್ಥೆ ಮತ್ತು ಪ್ರೊಫೆಸರ್ ಗಳ ಬಗ್ಗೆ ಇದೇ ರೀತಿಯ ದೂರುಗಳನ್ನು ನೀಡುತ್ತಿದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಹೇಳುತ್ತಾರೆ.


ಕಳೆದೆರಡು ದಿನಗಳಿಂದ ನಮಗೆ ಸಾಕಷ್ಟು ಕರೆಗಳು ಬರುತ್ತಿದ್ದು ಐಐಟಿ ಮದ್ರಾಸ್ ನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕರೆ ಮಾಡಿ ತಮಗೂ ಇದೇ ರೀತಿ ಕಷ್ಟಗಳಾಗುತ್ತಿವೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಫಾತಿಮಾಳ ಅವಳಿ ಸೋದರಿ ಆಯಿಷಾ ಲತೀಫ್ ಹೇಳುತ್ತಾರೆ.


ಒಬ್ಬ ವಿದ್ಯಾರ್ಥಿ ನಮ್ಮ ತಂದೆಗೆ ಕರೆ ಮಾಡಿ ಕ್ಯಾಂಪಸ್ ನಲ್ಲಿ ಕಿರುಕುಳ ನೀಡುವುದು ಸರ್ವೇಸಾಮಾನ್ಯವಾಗಿದೆ.. ಪ್ರೊಫೆಸರ್ ಗಳ ಕ್ರೂರ ವರ್ತನೆ ಬಗ್ಗೆ ಹಲವರು ಹೇಳಿಕೊಂಡಿದ್ದಾರೆ ಎಂದರು. 


ನನ್ನ ಸೋದರಿ ಮನೆಗೆ ಬಂದಾಗ ಖುಷಿಯಾಗಿರುತ್ತಿದ್ದಳು. ನಂತರ ಹಾಸ್ಟೆಲ್ ಗೆ ಹೋದ ಮೇಲೆ ಮತ್ತೆ ಆತಂಕ ಶುರುವಾಗುತ್ತಿತ್ತು ಎಂದು ಆಯಿಷಾ ಹೇಳಿದ್ದಾರೆ.


ನಾವು ಹಲವು ಬಾರಿ ಅವಳಲ್ಲಿ ಏನಾಗುತ್ತಿದೆ ಎಂದು ಕೇಳಿದರೂ ಹೇಳುತ್ತಿರಲಿಲ್ಲ. ಒಬ್ಬ ಪ್ರೊಫೆಸರ್ ವಿದ್ಯಾರ್ಥಿಗಳ ಜೊತೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹಲವು ಬಾರಿ ನನ್ನ ಸೋದರಿ ಹೇಳುತ್ತಿದ್ದಳು. ಆದರೆ ಯಾವುದೇ ಕೆಟ್ಟ ಅನುಭವವಾದ ಬಗ್ಗೆ ಹೇಳಿಕೊಂಡಿರಲಿಲ್ಲ. ಆಕೆಯ ಮೊಬೈಲ್ ತಪಾಸಣೆ ಮಾಡುವಾಗ ನಮ್ಮ ಸಮ್ಮುಖದಲ್ಲಿ ಮಾಡಿ ಎಂದು ಮುಖ್ಯಮಂತ್ರಿ ಹಾಗೂ ಇತರ ಉನ್ನತಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಫಾತಿಮಾಳ ಮಾವ ಶೈನ್ ದೇವ್ ಹೇಳಿದ್ದಾರೆ.


ಫಾತಿಮಾಳ ಲ್ಯಾಪ್ ಟಾಪ್ ವಶಪಡಿಸಿಕೊಂಡು ತಪಾಸಣೆ ಮಾಡಲಾಗಿದ್ದು ಆಕೆಯ ಇ ಮೇಲ್ ಗಳನ್ನು ಕೂಡ ಪರೀಕ್ಷಿಸಲಾಗಿದೆ. ಅದರಲ್ಲಿ ಪ್ರೊಫೆಸರ್ ಗೆ ಹೆಚ್ಚಿನ 5 ಅಂಕ ನೀಡುವಂತೆ ಕೇಳಿಕೊಂಡಿದ್ದು, ಪ್ರೊಫೆಸರ್ ಅದನ್ನು ಕಡೆಗಣಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವೇನು?: ಐಐಟಿ ಮದ್ರಾಸ್ ನಲ್ಲಿ ಪ್ರಥಮ ವಷದ ಎಂಎ (ಮಾನವಿಕ ಮತ್ತು ಅಭಿವೃದ್ಧಿ ಅಧ್ಯಯನಗಳು,ಸಂಯೋಜಿತ) ವಿದ್ಯಾರ್ಥಿನಿಯಾಗಿದ್ದ ಫಾತಿಮಾ ಲತೀಫ್‌ ಕೇರಳದ ಕೊಲ್ಲಂ ಮೂಲದವರಾಗಿದ್ದು, ಕಳೆದ ಶನಿವಾರ ಬೆಳಗ್ಗೆ ಆಕೆಯ ಮೃತದೇಹ ಐಐಟಿ ಮದ್ರಾಸ್‌ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.


ತಮಿಳುನಾಡು ಪೊಲೀಸರು ವಿದ್ಯಾರ್ಥಿನಿಯ ಸಾವನ್ನು ಅಸ್ವಾಭಾವಿಕ ಸಾವು (ಆತ್ಮಹತ್ಯೆ) ಎಂದು ಕೇಸ್‌ ದಾಖಲಿಸಿಕೊಂಡಿದ್ದಾರೆ. ಆದರೆ ಯಾವುದೇ ಡೆತ್‌ ನೋಟ್‌ ಸಿಕ್ಕಿಲ್ಲ. ಆದರೆ, ಫಾತಿಮಾಳ ಮೊಬೈಲ್‌ ಫೋನ್‌ನಲ್ಲಿ ದಾಖಲೆಯೊಂದು ದೊರೆತಿದೆ. ಅದರಲ್ಲಿ ಶಿಕ್ಷಕರೊಬ್ಬರ ಹೆಸರನ್ನು ತನ್ನ ಮಗಳು ಪ್ರಸ್ತಾಪಿಸಿದ್ದಾಳೆ. ನನ್ನ ಸಾವಿಗೆ ಆ ಪ್ರೊಫೆಸರ್‌ ಕಾರಣ ಎಂದೂ ಬರೆಯಲಾಗಿದೆ ಎಂದು ಫಾತಿಮಾರ ತಂದೆ ಲತೀಫ್‌ ಹೇಳಿಕೊಂಡಿದ್ದಾರೆ. 


ಘಟನೆ ನಡೆದ ಬಳಿಕ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಫಾತಿಮಾಳ ಪೋಷಕರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿ ಪ್ರಧಾನಿ ಮೋದಿಗೂ ಮನವಿ ಮಾಡಿದ್ದಾರೆ.

SCROLL FOR NEXT