ದೇಶ

ಶಬರಿಮಲೆ ದೇವಸ್ಥಾನ ಓಪನ್, ಈ ಬಾರಿಯೂ ಮಹಿಳೆಯರಿಗಿಲ್ಲ ಪ್ರವೇಶ

Lingaraj Badiger

ಶಬರಿಮಲೆ: ಎರಡು ತಿಂಗಳ ಶಬರಿಮಲೆ ಮಂಡಲ ಪೂಜೆ ಶನಿವಾರದಿಂದ ಆರಂಭವಾಗಿದ್ದು, ಸಂಜೆ ಐದು ಗಂಟೆಗೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ. ಆದರೆ ಈ ಬಾರಿಯೂ ಮಹಿಳಾ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.

ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಂಧ್ರಪ್ರದೇಶದ ವಿಜಯವಾಡದಿಂದ ಆಗಮಿಸಿದ್ದ 40 ಮಂದಿ ಭಕ್ತರ ತಂಡದಲ್ಲಿದ್ದ 10 ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.

ಆಂಧ್ರದ ಮಹಿಳಾ ಭಕ್ತರು ಪಂಪಾನದಿಯ ಸಮೀಪ ಬರುತ್ತಿದ್ದಂತೆ ಇತರೆ ಭಕ್ತರು ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಹಿಳಾ ಭಕ್ತರನ್ನು ವಾಪಸ್ ಕಳುಹಿಸಿದ್ದಾರೆ.

ಮಹಿಳಾ ಭಕ್ತರು ವಾಪಸ್ ತೆರಳಿದ್ದು, ಅವರ ತಂಡದಲ್ಲಿದ್ದ ಪುರುಷರು ಮಾತ್ರ ದೇವರ ದರ್ಶನಕ್ಕೆ ತೆರಳಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವರ್ಷ ಇಲ್ಲಿಗೆ ಬರುವ ಕೆಲವು ಭಕ್ತರಿಗೆ ಶಬರಿಮಲೆಯ ಸಂಪ್ರದಾಯ ಮತ್ತು ನಂಬಿಕೆಗಳ ಬಗ್ಗೆ ಗೊತ್ತಿರುವುದಿಲ್ಲ. ಇಲ್ಲಿ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಶಬರಿಮಲೆ ಯಾತ್ರೆ ಆರಂಭದ ಹಿನ್ನೆಲೆಯಲ್ಲಿ ಪಂಪಾ, ಶಬರಿಗಿರಿ ಮತ್ತು ಶಬರಿಮಲೆ ದೇಗುಲದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

SCROLL FOR NEXT