ದೇಶ

ಇಂದಿನಿಂದ ಲೋಕಸಭೆ ಚಳಿಗಾಲ ಅಧಿವೇಶನ ಆರಂಭ: ಕೇಂದ್ರ ಸರ್ಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷಗಳು ಸಜ್ಜು

Manjula VN

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಡಿಸೆಂಬರ್ 13ರವರೆಗೂ ನಡೆಯಲಿರುವ ಈ ಅಧಿವೇಶನದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ, ಬೆಲೆ ಏರಿಕೆ, ಕಾಶ್ಮೀರದಲ್ಲಿನ ಪರಿಸ್ಥಿತಿ, ಕಾಶ್ಮೀರದ ಸಂಸದ ಫಾರೂಖ್ ಅಬ್ದುಲ್ಲಾಗೆ ಗೃಹ ಬಂಧನ, ದೆಹಲಿ ವಾಯುಮಾಲಿನ್ಯ ಇತ್ಯಾದಿ ವಿಷಯಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. 

ಈ ನಡುವೆ ಪೌರತ್ವ (ತಿದ್ದುಪಡಿ) ವಿಧೇಯಕ, ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ, ದಿವಾಳಿತನ ತಿದ್ದುಪಡಿ ಮಸೂದೆ, ಬಹುರಾಜ್ಯ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ ಸೇರಿದಂತೆ 35 ಮಹತ್ವದ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧಗೊಂಡಿದೆ. 

ಇದೇ ವೇಳೆ ಕಾರ್ಪೋರೇಟ್ ತೆರಿಗೆ ಕಡಿತಗೊಳಿಸುವ ಹಾಗೂ ಇ-ಸಿಗರೇಟ್ ನಿಷೇಧಿಸುವ ಕುರಿತು ಸರ್ಕಾರ 2 ಸುಗ್ರೀವಾಜ್ಞೆಗಳನ್ನು ಕೆಲವು ತಿಂಗಳುಗಳ ಹಿಂದೆ ಹೊರಡಿಸಿದ್ದು, ಇವನ್ನು ಕಾನೂನಾಗಿ ಪರಿವರ್ತಿಸಲು ವಿಧೇಯಕಗಳನ್ನು ಮಂಡಿಸಲು ತೀರ್ಮಾನಿಸಿದೆ. 

ಕಳೆದ ಅಧಿವೇಶನದಲ್ಲಿ ಕಾಶ್ಮೀರದ 370ನೇ ವಿಧಿ ರದ್ದು ಸೇರಿದಂತೆ ಹಲವು ಮಸೂದೆಗಳನ್ನು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಗದ್ದಲದ ನಡುವೆ ವಿವಿಧ ಮಸೂದೆಗಳನ್ನು ಯಶಸ್ವಿಯಾಗಿ ಮಂಡಿಸಿ, ಸರ್ಕಾರ ಅನುಮೋದನೆ ಪಡೆದಿತ್ತು. ಆದರೆ, 20 ದಿನ ನಡೆಯಲಿರುವ ಈ ಅಧಿವೇಶನದಲ್ಲೂ ಪೌರತ್ವ ಕಾಯ್ದೆ ತಿದ್ದುಪಡಿ ಸೇರಿ ಮೊದಲಾದ ವಿವಾದಿತ ಮಸೂದೆಗಳು ಇದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಿರೀಕ್ಷಿಸಲಾಗಿದೆ. 

ಭಾರತದ ನೆರೆ ದೇಶಗಳ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ. ಇದು ಬಿಜೆಪಿಯ ಚುನಾವಣಾ ವಿಷಯವೂ ಆಗಿತ್ತು. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ಎತ್ತುವ ಸಾಧ್ಯತೆಗಳಿವೆ. 

SCROLL FOR NEXT