ದೇಶ

ಜೆಎನ್ ಯು ಕ್ಯಾಂಪಸ್ ಹೊರಗೆ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ, ಪೊಲೀಸರ ನಿಯೋಜನೆ: ಸೆಕ್ಷನ್ 144 ಜಾರಿ 

Sumana Upadhyaya

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರುತ್ತಿದ್ದು ಭದ್ರತೆ ಕ್ರಮವಾಗಿ ದೆಹಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.


ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಸದಸ್ಯರು ಇಂದು ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದು ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ವಿಶ್ವವಿದ್ಯಾಲಯದ ಹೊರಗೆ 10 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು ಪ್ರತಿ ತುಕಡಿಯಲ್ಲಿ 70ರಿಂದ 80 ಮಂದಿ ಪೊಲೀಸರಿದ್ದಾರೆ.


 ವಿದ್ಯಾರ್ಥಿಗಳ ಪ್ರತಿಭಟನೆ, ಇನ್ನೊಂದೆಡೆ ಪೊಲೀಸರ ನಿಯೋಜನೆಯಿಂದ ಕಂಗೆಟ್ಟಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಒಕ್ಕೂಟ ತೀವ್ರ ಆತಂಕ ವ್ಯಕ್ತಪಡಿಸಿದೆ. ಇದೊಂದು ದುರದೃಷ್ಟಕರ ಸನ್ನಿವೇಶ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ಸಾಗುವಲ್ಲಿ ಬಿಗಿ ಭದ್ರತೆ ಒದಗಿಸಲು ಪೊಲೀಸರು ಮುಂದಾಗಿದ್ದಾರೆ. ಸಂಸತ್ತಿಗೆ ಪ್ರವೇಶಿಸುವ ಮಾರ್ಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. 


ಸಮಿತಿ ರಚನೆ: ಈ ಮಧ್ಯೆ ವಿದ್ಯಾರ್ಥಿಗಳ ಮತ್ತು ಆಡಳಿತ ಮಂಡಳಿ ನಡುವಿನ ಸಮಸ್ಯೆಗಳನ್ನು ಬಗೆಹರಿಸಿ ಸಹಜ ಪರಿಸ್ಥಿತಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಸಮಿತಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಮಾತುಕತೆ ನಡೆಸಿ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತೆ ಶಿಫಾರಸುಗಳನ್ನು ಸಲ್ಲಿಸಲಿದೆ. 


ವಿಶ್ವವಿದ್ಯಾಲಯದ ಆಡಳಿತ ವರ್ಗ ಕಳೆದ ಬುಧವಾರ ಶುಲ್ಕ ಹೆಚ್ಚಳದ ಒಂದು ಭಾಗವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರೂ ಕೂಡ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದು ಶುಲ್ಕ ಭಾಗಶಃ ಇಳಿಕೆ ಆಡಳಿತ ವರ್ಗದ ಕಣ್ಣೊರೆಸುವ ತಂತ್ರ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

SCROLL FOR NEXT