ದೇಶ

ಸಂಸತ್ ಅಧಿವೇಶನದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ: ಪ್ರಧಾನಿ ಮೋದಿ

Manjula VN

ನವದೆಹಲಿ: ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಪ್ರತೀ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ಇಂದಿನಿಂದ ಚಳಿಗಾಲ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೂ ಅಧಿವೇಶನ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಧಿವೇಶನಕ್ಕೆ ಆಗಮಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿಯವರು, ಪ್ರತೀ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಸಂಸತ್ತಿನಲ್ಲಿ ಚರ್ಚೆಗಳನ್ನು ಸಮೃದ್ಧಗೊಳಿಸಲು ಪ್ರತೀಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

2019ರ ಕಡೆಯ ಅಧಿವೇಶನ ಇದಾಗಿದೆ. ಅಲ್ಲದೆ, ರಾಜ್ಯಸಭೆಯ 250 ಅಧಿವೇಶನ ಕೂಡ ಆಗಿದ್ದು, ಅತ್ಯಂತ ಪ್ರಮುಖವಾಗಿದೆ. ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಅಂದು ನಮ್ಮ ಸಂವಿಧಾನ 70 ವರ್ಷಗಳನ್ನು ಪೂರೈಸಲಿದೆ. ಸಂಸತ್ತಿನಲ್ಲಿ ಪಾರದರ್ಶಕ, ಸ್ಪಷ್ಟ ಚರ್ಚೆಗಳು ನಡೆಯುವ ಅಗತ್ಯವಿದೆ. ಗುಣಮಟ್ಟದ ಚರ್ಚೆಗಳು, ಮಾತುಕತೆಗಳು ನಡೆಯಬೇಕು. ಸಂಸತ್ತಿನ ಚರ್ಚೆಗಳು ಸಮೃದ್ಧಗೊಳಿಸಲು ಪ್ರತೀಯೊಬ್ಬರು ಸಹಕರಿಸಬೇಕು. ಪ್ರತೀ ಸಂಸದರ ಸಹಕಾರದಿಂದ ಸಂಸತ್ತ್ ಅಧಿವೇಶನ ಯಶಸ್ವಿಗೊಳ್ಳಬೇಕು. ಯಶಸ್ವಿ ಅಧಿವೇಶನಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ಸಂಸದರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ದೇಶದ ಅಭಿವೃದ್ಧಿಗೆ ಈ ಅಧಿವೇಶನ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT