ದೇಶ

ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಎನ್ ಸಿಪಿ, ಬಿಜೆಡಿಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಇತ್ತೀಚಿಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿರುವ ಎನ್ ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಾಡಿ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವ ಮಧ್ಯೆಯೇ, ಪ್ರಧಾನಿ ಮೋದಿ ಅವರು, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಡಿ ಪಕ್ಷ ಲೋಕಸಭೆಯಲ್ಲಿ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ರಾಜ್ಯಸಭೆಯ ಐತಿಹಾಸಿಕ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಎನ್ ಸಿಪಿ(ಶರದ್ ಪವಾರ್) ಹಾಗೂ ಬಿಜು ಜನತಾ ದಳದ(ನವೀನ್ ಪಟ್ನಾಯಕ್) ಮುಖಂಡರು ಯಾವತ್ತೂ ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿಲ್ಲ. ತಮ್ಮ ಅಹವಾಲಿನ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಸಂಸತ್ ನಲ್ಲಿ ಯಾವುದೇ ಕೋಲಾಹಲ ನಡೆಸದೇ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಕೂಡಾ ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಮೋದಿ ಇತರೆ ಸಂಸದರಿಗೆ ಸಲಹೆ ನೀಡಿದರು.

ಇಂದು ನಾನು ಎನ್ ಸಿಪಿ, ಬಿಜೆಡಿ ಸೇರಿ ಎರಡೂ ಪಕ್ಷಗಳನ್ನು ಅಭಿನಂದಿಸುತ್ತೇನೆ. ಎರಡೂ ಪಕ್ಷಗಳೂ ಸಂಸತ್ತಿನ ನಡವಳಿಕೆ(ಶಿಷ್ಟಾಚಾರ)ಯನ್ನು ಸಮರ್ಪಕವಾಗಿ ಅನುಸರಿಸಿವೆ. ಅವರು ಯಾವತ್ತೂ ಸಂಸತ್ ನ ಬಾವಿ ಬಳಿ ತೆರಳಿ ಗದ್ದಲ ಎಬ್ಬಿಸಿಲ್ಲ ಎಂದು ಹೊಗಳಿದರು.

ರಾಜ್ಯಸಭೆ ದೂರದೃಷ್ಟಿ ಉಳ್ಳ ಮೇಲ್ಮನೆಯಾಗಿದ್ದು, ಬೌದ್ಧಿಕ ಶ್ರೀಮಂತಿಕೆಯನ್ನು ನೀಡಿದೆ. ಇದು ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅನೇಕ ಧೀಮಂತ ನಾಯಕನ್ನು ಕಂಡಿದೆ. ಹೀಗಾಗಿ ರಾಜ್ಯಸಭೆಯು ಲೋಕಸಭೆಯಂತಲ್ಲ ಎಂದರು.

SCROLL FOR NEXT