ದೇಶ

ತೀವ್ರ ಗದ್ದಲ, ಕೋಲಾಹಲದಲ್ಲಿಯೇ ಸಾಗಿದ ಸಂಸತ್ತಿನ ಉಭಯ ಸದನ ಕಲಾಪ: ಕಾಂಗ್ರೆಸ್ ಸಂಸದರಿಂದ ಘೋಷಣೆ 

Sumana Upadhyaya

ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು. ಕಾಂಗ್ರೆಸ್ ಸದಸ್ಯರು ಹಲವು ವಿಷಯಗಳನ್ನು ಎತ್ತಲು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.


ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ 20ಕ್ಕೂ ಹೆಚ್ಚು ಸದಸ್ಯರು ಪ್ರಶ್ನೋತ್ತರ ಅವಧಿಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಪದೇ ಪದೇ ಮನವಿ ಮಾಡಿಕೊಂಡರೂ ಕೇಳಲಿಲ್ಲ.


ತೀವ್ರ ಗದ್ದಲ, ಕೋಲಾಹಲದ ನಡುವೆಯೇ ಪ್ರಶ್ನೋತ್ತರ ವೇಳೆ 5 ಪ್ರಶ್ನೆಗಳು ಮತ್ತು ಪೂರಕಗಳನ್ನು ಕೈಗೆತ್ತಿಕೊಳ್ಳಲಾಯಿತು. 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆಯನ್ನು ಹಿಂತೆಗೆದುಕೊಂಡಿದ್ದನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸಿದರು. ದ್ವೇಷ ರಾಜಕಾರಣವನ್ನು ನಿಲ್ಲಿಸಿ ಸರ್ವಾಧಿಕಾರ ಆಡಳಿತವನ್ನು ಕೊನೆಗೊಳಿಸಿ ತಮಗೆ ನ್ಯಾಯ ಒದಗಿಸುವಂತೆ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದರು. 


ಕೆಲ ಸದಸ್ಯರು ತಮಿಳಿನಲ್ಲಿ ಸಹ ಘೋಷಣೆಗಳನ್ನು ಕೂಗಿದ್ದು ಕೇಳಿಬಂತು. 


ರಾಜ್ಯಸಭೆಯ ಕಲಾಪದ ಹೈಲೈಟ್ಸ್: ಇಂದು ರಾಜ್ಯಸಭೆಯಲ್ಲಿ ನಡೆದ ಎರಡನೇ ದಿನದ ಕಲಾಪದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಪಟ್ಟಂತೆ ಕಲಂ 267ರಡಿಯಲ್ಲಿ ಕಲಾಪದ ಅವಧಿಯನ್ನು ರದ್ದುಗೊಳಿಸಬೇಕೆಂದು ಸಿಪಿಐನ ರಾಜ್ಯಸಭಾ ಸದಸ್ಯ ಬಿನೊಯ್ ವಿಸ್ವಾನ್ ಹೇಳಿದರು.

SCROLL FOR NEXT