ದೇಶ

ರೊಟೇಷನ್ ಆಧಾರದಲ್ಲಿ 'ಮಹಾ' ಮುಖ್ಯಮಂತ್ರಿ ಹುದ್ದೆ: ಮೊದಲಿಗೆ ಶಿವಸೇನೆಗೆ ನಂತರ ಎನ್ ಸಿಪಿಗೆ? ಮೂಲಗಳು

Nagaraja AB

ನವ ದೆಹಲಿ: ಹಲವು ದಿನಗಳಿಂದ ಹಗ್ಗ ಜಗ್ಗಾಟಕ್ಕೆ ಕಾರಣವಾಗಿರುವ ಮಹಾರಾಷ್ಟ್ರದಲ್ಲಿನ ಮುಖ್ಯಮಂತ್ರಿ ಹುದ್ದೆ ರೊಟೇಷನ್ ಆಧಾರದಲ್ಲಿ ಶಿವಸೇನೆ ಹಾಗೂ ಎನ್ ಸಿಪಿ ನಡುವೆ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. 

ಐದು ವರ್ಷಗಳ ಅವಧಿಯಲ್ಲಿ ಮೊದಲಿಗೆ ಶಿವಸೇನಾ ಪಕ್ಷ ಮುಖ್ಯಮಂತ್ರಿ ಹುದ್ದೆ ಪಡೆಯಲಿದೆ. ನಂತರ ಎನ್ ಸಿಪಿ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂಬಂತಹ ಮಾತುಗಳು ಕೇಳಿಬಂದಿವೆ.

ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿಯೇ ಬಿಜೆಪಿ ಹಾಗೂ ಶಿವಸೇನಾ ನಡುವೆ ಪೈಪೋಟಿ ಉಂಟಾಗಿತ್ತು. ಹೀಗಾಗಿ ಐದು ವರ್ಷಗಳ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಪ್ರಶ್ನೆ ಉದ್ಬವಿಸುವುದಿಲ್ಲ, ಇನ್ನೂ ಉಳಿದ ಎರಡೂವರೆ ವರ್ಷಗಳ ಕಾಲ ಎನ್ ಸಿಪಿ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಲಿದೆ ಎಂದು ಎನ್ ಸಿಪಿ ಮುಖಂಡರು ಹೇಳಿದ್ದಾರೆ.

ಆದಾಗ್ಯೂ, ಬುಧವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚಿಸಿಲ್ಲ ಎಂಬುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ. 

ಶಿವಸೇನೆಯವರೇ ಮುಖ್ಯಮಂತ್ರಿ ಆಗುತ್ತಾರೆ ಆದರೆ, ನಾವೇ ಐದು ವರ್ಷ ಮುಖ್ಯಮಂತ್ರಿ ಹುದ್ದೆ ಹೊಂದಲಿದ್ದೇವೆ ಎಂದು ಹೇಳಲು ಆಗದು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 

ಕಾಂಗ್ರೆಸ್ ಎನ್ ಸಿಪಿ ಜೊತೆಗಿನ ಇತರ ಸಣ್ಣ ಮೈತ್ರಿ ಪಕ್ಷಗಳು ಕೂಡಾ ಶಿವಸೇನೆ ಜೊತೆಗಿನ ಮೈತ್ರಿಯಲ್ಲಿ ಇರಲಿವೆ ಎಂದು ಎನ್ ಸಿಪಿ ಮೂಲಗಳು ತಿಳಿಸಿವೆ. 

SCROLL FOR NEXT