ದೇಶ

ಅಜಂಖಾನ್,ಅವರ ಕುಟುಂಬದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ,ಯಾವುದೇ ಕ್ಷಣದಲ್ಲಿ ಬಂಧನ

Nagaraja AB

ರಾಮ್ ಪುರ: ಸಮಾಜವಾದಿ ಪಕ್ಷದ ಸಂಸದ ಮೊಹಮ್ಮದ್ ಅಜಂಖಾನ್ ಹಾಗೂ ಅವರ ಕುಟುಂಬದ ವಿರುದ್ಧ ಉತ್ತರ ಪ್ರದೇಶದ ರಾಮ್ ಪುರ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 

ಸಮಾಜವಾದಿ ಪಕ್ಷದ ಶಾಸಕರೂ ಆಗಿರುವ ಅಜಂಖಾನ್ ಮಗ ಅಬ್ದುಲ್ಲಾ ಅಜಂ ಅವರ ಜನನ ದಾಖಲೆಗಳಿಗೆ  ಸಂಬಂಧಿಸಿದ ವಿವಾದ ಇದಾಗಿದೆ. 

ಅಜಂಖಾನ್ ಹಾಗೂ ಅವರ ಪತ್ನಿ ಮತ್ತು ಮಗ ಅಬ್ದುಲ್ಲಾ ಅಜಂ ಮಂಗಳವಾರ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಆದರೆ, ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ನ್ನು ನ್ಯಾಯಾಲಯ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ. 

ಬಿಜೆಪಿ ಮುಖಂಡ ಆಕಾಶ್ ಸಕ್ಸೆನಾ ಅಜಂಖಾನ್ ಹಾಗೂ ಅವರ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 420, 467, 468, 471ರ ಅಡಿಯಲ್ಲಿ ದೂರು ದಾಖಲಿಸಿದ್ದರು. ಅಬ್ದುಲ್ಲಾ ಪಾಸ್ ಪೋರ್ಟ್ ಹಾಗೂ ಚುನಾವಣಾ ಅಫಿಡವಿಟ್ ನಲ್ಲಿ ಬೇರೇ ಬೇರೆ ಜನನ ಪ್ರಮಾಣ ಪತ್ರಗಳನ್ನು ನೀಡಿರುವುದರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದ ವಿರುದ್ಧ ದೂರು ದಾಖಲಿಸಲಾಗಿದೆ. 

ಭೂ ಒತ್ತುವರಿ, ಪುಸ್ತಕ ಕಳವು, ಪ್ರತಿಮೆ ಕಳವು, ಎಮ್ಮೆ, ಮೇಕೆಗಳ ಕಳವು, ವಂಚನೆ ಸೇರಿದಂತೆ ಅಜಂಖಾನ್ ಹಾಗೂ ಅವರ ಕುಟುಂಬದ ವಿರುದ್ಧ ಸುಮಾರು 84 ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ನಿರೀಕ್ಷಿತ ಜಾಮೀನು ಪಡೆಯುವಲ್ಲಿ ಅಜಂಖಾನ್ ವಿಫಲರಾಗಿದ್ದಾರೆ. ಅವರ ಪತ್ನಿ ತಾಂಜೀನಾ ಫಾತೀಮಾ ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ.

SCROLL FOR NEXT