ದೇಶ

ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್, ಮಹಾ ರೈತರ ಸಮಸ್ಯೆ ಪರಿಹಾರಕ್ಕೆ ಮನವಿ

Lingaraj Badiger

ನವದೆಹಲಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್'ಸಿಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಮಧ್ಯೆ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇಂದು ಮಧ್ಯಾಹ್ನ 12.30ರ ಸುಮಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಶರದ್ ಪವಾರ್ ಅವರು, ಸಂಕಷ್ಟದಲ್ಲಿರುವ ಮಹಾರಾಷ್ಟ್ರದ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸೋಯಾಬೀನ್, ಭತ್ತ, ರಾಗಿ, ಕಾರ್ನ್, ಟೊಮೆಟೊ ಮತ್ತು ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಮೂರು ಪುಟಗಳ ಮನವಿಯೊಂದನ್ನು ಶರದ್ ಪವಾರ್ ಅವರು ಪ್ರಧಾನಿಗೆ ಸಲ್ಲಿಸಿದ್ದಾರೆ.

ಕಳೆದ 10 ತಿಂಗಳಲ್ಲಿ ನಾಶಿಕ್ ಜಿಲ್ಲೆಯಲ್ಲಿ 44 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶರದ್ ಪವಾರ್ ಅವರು ಹೇಳಿದ್ದಾರೆ.

ರಾಜ್ಯಸಭೆಯ ಐತಿಹಾಸಿಕ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿಯವರು, ಎನ್ ಸಿಪಿ(ಶರದ್ ಪವಾರ್) ಹಾಗೂ ಬಿಜು ಜನತಾ ದಳದ(ನವೀನ್ ಪಟ್ನಾಯಕ್) ಮುಖಂಡರು ಯಾವತ್ತೂ ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿಲ್ಲ. ತಮ್ಮ ಅಹವಾಲಿನ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ್ದರು. ಇದರ ಬೆನ್ನಲ್ಲೇ ಶರದ್ ಪವಾರ್-ಮೋದಿ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

SCROLL FOR NEXT