ದೇಶ

ರಕ್ಷಣಾ ಸಚಿವಾಲಯದ ಸಮಿತಿಯಲ್ಲಿ ಮಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಞಾ ಠಾಕೂರ್

Manjula VN

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ಸಮಾಲೋಚನಾ ಸಮಿತಿಗೆ ಮಲೆಗಾಂವ್ ಸ್ಫೋಟದ ಆರೋಪಿ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ನೇಮಕ ಮಾಡಲಾಗಿದೆ. 

2019ರ ಸಂಸತ್ ಚುನಾವಣೆಯಲ್ಲಿ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ಞಾ ಠಾಕೂರ್ ಅವರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದರು. ಮಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಜ್ಞಾ ಅವರು 2017ರ ಏಪ್ರಿಲ್ ತಿಂಗಳಿನಲ್ಲಿ ಮುಂಬೈ ಹೈಕೋರ್ಟ್'ನಿಂದ ಜಾಮೀನು ಪಡೆದುಕೊಂಡಿದ್ದರು.  

21 ಸದಸ್ಯರನ್ನು ಹೊಂದಿರುವ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೇತೃತ್ವ ವಹಿಸಿದ್ದು, ಈ ಸಮಿತಿಯಲ್ಲಿ ಪ್ರಜ್ಞಾ ಠಾಕೂರ್ ಕೂಡ ಇದೀಗ ಒಬ್ಬರಾಗಿದ್ದಾರೆ. 

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪ್ರಜ್ಞಾ ಠಾಕೂರ್ ಅವರು ಸದಾಕಾರ ಸುದ್ದಿಯಲ್ಲಿದ್ದಾರೆ. ಮಹಾತ್ಮ ಗಾಂಧಿ ಹತ್ಯೆಗೆ ಕಾರಣವಾದ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎನ್ನುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದರು. ಇವರ ಹೇಳಿಕೆಯಿಂದ ಪಕ್ಷ ಸಾಕಷ್ಟು ಮುಜುಗರಕ್ಕೊಳಗಾಗಿತ್ತು. ಪ್ರಧಾನಿ ಮೋದಿಯವರೂ ಕೂಡ ಹೇಳಿಕೆ ಕುರಿತು ಕ್ಷಮೆಯಾಚಿಸುವಂತೆ ತಾಕೀತು ಮಾಡಿದ್ದರು. 

SCROLL FOR NEXT