ದೇಶ

ದೇಶದಾದ್ಯಂತ ಶೀಘ್ರದಲ್ಲೇ ಎನ್ಆರ್'ಸಿ ಜಾರಿ: ಕೇಂದ್ರ ಘೋಷಣೆ

Manjula VN

ನವದೆಹಲಿ: ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಲು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್-ಎನ್ಆರ್'ಸಿ)ಯನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ರಾಜ್ಯಸಭೆಯಲ್ಲಿ ಮಾತನಾಡಿರುವ ಅಮಿತ್ ಶಾ ಅವರು, ದೇಶದಾದ್ಯಂತ ಎನ್ಆರ್"ಸಿ ವಿಸ್ತರಿಸುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಎನ್ಆರ್'ಸಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ದೇಶದಾದ್ಯಂತ ಎನ್ಆರ್'ಸಿ ವಿಸ್ತರಿಸುವುದಾಗಿ ಅಮಿತ್ ಶಾ ಹೇಳಿದ್ದರು. ಆದರೆ, ಇದೀಗ ಇದೇ ಮೊದಲ ಬಾರಿಗೆ ಅದನ್ನು ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. 

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಎನ್ಆರ್'ಸಿ ಪ್ರಕ್ರಿಯೆ ನಡೆಸುವಾಗ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರೂ ಚಿಂತೆ ಪಡಬೇಕಿಲ್ಲ ಎಂದು ಹೇಳಿದರು. 

ಬೇರೊಂದು ಸಮುದಾಯಕ್ಕೆ ಸೇರಿದ ಜನರನ್ನು ಸೇರ್ಪಡೆ ಮಾಡಬಾರದು ಎಂಬ ಅಂಶವೇ ಎನ್ಆರ್'ಸಿಯಲ್ಲಿ ಇಲ್ಲ. ಭಾರತೀಯ ಪ್ರಜೆಗಳಾಗಿರುವ ಎಲ್ಲಾ ಧರ್ಮೀಯ ಜನರ ಹೆಸರನ್ನೂ ಸೇರಿಸಲಾಗುತ್ತದೆ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಎನ್ಆರ್'ಸಿಯೇ ಬೇರೆ, ಪೌರತ್ವ ತಿದ್ದುಪಡಿ ಮಸೂದೆಯೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ. 
 
ಸುಪ್ರೀಂಕೋರ್ಟ್'ನ ಆದೇಶದ ಮೇರೆಗೆ ಅಸ್ಸಾಂನಲ್ಲಿ ಎನ್ಆರ್'ಸಿಯನ್ನು ನಡೆಸಲಾಯಿತು. ದೇಶದಾದ್ಯಂತ ಎನ್ಆರ್'ಸಿಯನ್ನು ಜಾರಿಗೆ ತರುವಾಗ ಅಸ್ಸಾಂ ಅನ್ನೂ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎನ್ಆರ್'ಸಿ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗಳು ನ್ಯಾಯಾಧೀಕರಣದ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಅಸ್ಸಾಂನಾದ್ಯಂತ ನ್ಯಾಯಾಧೀಕರಣಗಳನ್ನು ತೆರೆಯಲಾಗಿದೆ. ಅಲ್ಲಿಗೆ ಹೋಗಲು ಹಣ ಇಲ್ಲ ಎನ್ನುವವರಿಗೆ ಅಸ್ಸಾಂ ಸರ್ಕಾರವೇ ಹಣಕೊಟ್ಟು ವಕೀಲರನ್ನು ನೇಮಕ ಮಾಡಿಕೊಡಲಿದೆ ಎಂದು ವಿವರಿಸಿದರು. 
 
ಪೌರತ್ವ ಮಸೂದೆ ಎಂದರೇನು?
ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿದ ಕಾರಣಕ್ಕೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರು. ಅಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಜೊತೆಗೆ ಹೀಗೆ ಪೌರತ್ವ ಪಡೆಯಲು, ವಲಸಿಗರು ಭಾರತದಲ್ಲಿ ಕನಿಷ್ಠ 11 ವರ್ಷ ನೆಲೆಸಿರಬೇಕು ಎಂಬ ನಿಯಮವನ್ನು ಸರ್ಕಾರ 6 ವರ್ಷಕ್ಕೆ ಇಳಿಸಿದೆ. ಆದರೆ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಈಶಾನ್ಯ ರಾಜ್ಯಗಳ ಹಲವು ಸಂಘಟನೆಗಳು ವಿರೋಧ ಹೊಂದಿವೆ. 

ಎನ್ಆರ್'ಸಿ ಎಂದರೇನು?
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಸೂದೆಯು, ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಉದ್ದೇಶ ಹೊಂದಿದೆ. ಮೊದಲ ಹಂತದಲ್ಲಿ ಸುಪ್ರೀಂಕೋರ್ಟ್ ಸೂಚನೆ ಅನ್ವಯ ಇದನ್ನು ಅಸ್ಸಾಂನಲ್ಲಿ ಜಾರಿಗೆ ತರಲಾಗಿತ್ತು. ಅಲ್ಲಿ ಇತ್ತೀಚೆಗೆ ಪ್ರಕಟಿಸಲಾದ ಅಂತಿಮ ವರದಿ ಅನ್ವಯ, 30 ಲಕ್ಷ ಜನರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸಲಾಗಿದೆ. ಆದರೆ, ಇವರಿಗೆಲ್ಲಾ ವಿದೇಶಿಗರ ಮೇಲ್ಮನವಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಲ್ಪಿಸಲಾಗಿದೆ. 

SCROLL FOR NEXT