ದೇಶ

ಕಾಶ್ಮೀರ ಸಂಪೂರ್ಣ ಸ್ಥಗಿತ ಆರೋಪ ತಪ್ಪು, ಅಪ್ರಸ್ತುತ: ಸುಪ್ರೀಂಗೆ ಕೇಂದ್ರ

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಕಾಶ್ಮೀರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪ ತಪ್ಪು ಮತ್ತು ಅಪ್ರಸ್ತುತ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಕಾಶ್ಮೀರದಲ್ಲಿ ವಿಧಿಸಲಾಗಿರುವ  ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪರವಾಗಿ ವಾದ ಮಂಡಿಸಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರ ಸರ್ಕಾರ ವಿಧಿಸಿದ ಕೆಲವು ನಿರ್ಬಂಧಗಳನ್ನು ಸಮರ್ಥಿಸಿಕೊಂಡಿರು.

ಅರ್ಜಿದಾರರು ಆರೋಪಿಸಿದಂತೆ ಕಾಶ್ಮೀರ ಸಂಪೂರ್ಣ ಸ್ಥಗಿತಗೊಂಡಿಲ್ಲ. ಆಗಸ್ಟ್ 13ರ ನಂತರ ಕೆಲವು ನಿರ್ಬಂಧಗಳನ್ನು ಹಿಂಪಡೆಯಲಾಗಿದೆ ಎಂದು ಮೆಹ್ತಾ ಅವರು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಪೀಠಕ್ಕೆ ತಿಳಿಸಿದರು.

370ನೇ ವಿಧಿ ರದ್ದುಗೊಳಿಸುವ ಮುನ್ನ ಕಾಶ್ಮೀರದಲ್ಲಿ ಕೇಂದ್ರದ ಕೆಲವು ಕಾನೂನುಗಳು ಅನ್ವಯವಾಗುತ್ತಿರಲಿಲ್ಲ. ಮಾಹಿತಿ ಪಡೆಯುವ ಹಕ್ಕು ಇರಲಿಲ್ಲ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. 370ನೇ ವಿಧಿ ರದ್ದುಗೊಳಿಸಿದ ಬಳಿಕ ಈಗ ಎಲ್ಲವೂ ಅನ್ವಯವಾಗುತ್ತಿದೆ ಎಂದು ತುಷಾರ್ ಮೆಹ್ತಾ ವಿವರಿಸಿದರು.

ಅಕ್ಟೋಬರ್ 14ರಿಂದ ಕಾಶ್ಮೀರದಲ್ಲಿ ಪೋಸ್ಟ್ ಪೇಡ್ ಮೊಬೈಲ್ ಸೇವೆ ಆರಂಭಿಸಲಾಗಿದೆ. ಶಾಲೆಗಳು ಪುನಾಂರಭವಾಗಿವೆ. ನ್ಯಾಯಾಲಯ, ಆರೋಗ್ಯ ಕೇಂದ್ರ, ಬ್ಯಾಂಕ್, ಮಾಧ್ಯಮ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿವೆ ಎಂದರು.

SCROLL FOR NEXT