ದೇಶ

ಇಂದ್ರ ದೇವರ ಸಿಂಹಾಸನ ಕೊಟ್ಟರೂ ಬಿಜೆಪಿ ಜೊತೆ ಸಖ್ಯ ಇಲ್ಲ, ಶಿವಸೇನೆಗೆ ಸಿಎಂ ಹುದ್ದೆ: ಸಂಜಯ್ ರಾವತ್ 

Sumana Upadhyaya

ಮುಂಬೈ: ಇಂದ್ರ ದೇವನ ಸಿಂಹಾಸನ ನೀಡಿದರೂ ಸಹ ಶಿವಸೇನೆ ಬಿಜೆಪಿ ಜೊತೆ ಇನ್ನು ಮೈತ್ರಿ ಬೆಳೆಸುವುದಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ ಸಿಪಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದರೆ ಶಿವಸೇನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟ ದೊರಕಲಿದೆ ಎಂದರು.


ಬಿಜೆಪಿ ಶಿವಸೇನೆಗೆ ಸಿಎಂ ಹುದ್ದೆ ನೀಡಲು ಒಪ್ಪಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಜೆಪಿಯ ಜೊತೆ ಮಾತುಕತೆ ನಡೆಸುವ ಸಮಯ ಮುಗಿದಿದೆ. ಈಗ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದಾರೆ ಎಂದರು. 


ಇಂದೇ ರಾಜ್ಯಪಾಲರನ್ನು ಮೂರೂ ಪಕ್ಷಗಳು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೀರಾ ಎಂದು ಕೇಳಿದಾಗ, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗ ಗವರ್ನರ್ ಅವರನ್ನು ಏಕೆ ಭೇಟಿ ಮಾಡಬೇಕು ಎಂದು ಪ್ರಶ್ನಿಸಿದರು.


ನಿನ್ನೆ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿಯಾಗಿ ಶಿವಸೇನೆಯ ನಾಯಕರೇ 5 ವರ್ಷ ಇರಬೇಕೆ ಅಥವಾ ಎರಡೂ ಪಕ್ಷಗಳು ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕೆ ಎಂದು ಚರ್ಚಿಸಲಾಯಿತು. ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಮಾಡಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ಎನ್ ಸಿಪಿಯ ಹಿರಿಯ ನಾಯಕರು ಕೂಡ ಹೇಳಿದ್ದಾರೆ. 


ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯಾದರೆ ಶಿವಸೇನೆಗೆ 16 ಹುದ್ದೆಗಳು, ಎನ್ ಸಿಪಿಗೆ 15 ಮತ್ತು ಕಾಂಗ್ರೆಸ್ ಗೆ 12 ಹುದ್ದೆಗಳನ್ನು ಹಂಚಿಕೆ ಮಾಡುವಂತೆ ನಾಯಕರ ಮಧ್ಯೆ ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ. 

SCROLL FOR NEXT