ದೇಶ

ರಾತ್ರೋರಾತ್ರಿ ಮಹಾ ಕ್ರಾಂತಿ: 41 ವರ್ಷಗಳ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

Lingaraj Badiger

ಮುಂಬೈ: ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ 41 ವರ್ಷಗಳ ಇತಿಹಾಕ ಮರುಕಳುಹಿಸಿದ್ದಾರೆ.

1978ರಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದು, ಇಂದು ಅವರ ಸೋದರನ ಮಗ ಅಜಿತ್ ಪವಾರ್ ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದಾರೆ. ಅಜಿತ್‌ ಪವಾರ್‌ ಅವರು ಈಗ ತೆಗೆದುಕೊಂಡ ನಿರ್ಧಾರಕ್ಕೂ ಹಿಂದೆ ಶರದ್‌ ಪವಾರ್‌ ಅವರು ತೆಗೆದುಕೊಂಡಿದ್ದ 41 ವರ್ಷಗಳ ಹಿಂದಿನ ನಡೆಗೂ ಹಲವು ಸಾಮ್ಯತೆಗಳಿವೆ.

1978ರಲ್ಲಿ ಶರದ್‌ ಪವಾರ್‌ ಕೇವಲ 37 ವರ್ಷಕ್ಕೇ ಮುಖ್ಯಮಂತ್ರಿಯಾಗಿದ್ದರು. ಅದೂ ಕಾಂಗ್ರೆಸ್ ಪಕ್ಷವನ್ನು ಒಡೆದು. ಕಾಂಗ್ರೆಸ್‌ (ಯು) ನಲ್ಲಿದ್ದ ಶರದ್‌ ಪವಾರ್, ಕೈ ಪಕ್ಷ ತೊರೆದು ಜನತಾ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಸಿಎಂ ಆದರು. ನಂತರ ಕಾಂಗ್ರೆಸ್‌ (ಎಸ್‌) ಎಂಬ ಪಕ್ಷ ಸ್ಥಾಪಿಸಿ ಜನತಾ ಪಕ್ಷದೊಂದಿಗೆ ಮೈತ್ರಿ ಸರಕಾರ ನಡೆಸುತ್ತಿದ್ದರು.

ಈಗ ಅಜಿತ್ ಪವಾರ್ ಅವರು ಸಹ ಚಿಕ್ಕಪ್ಪನ ನಡೆ ಅನುಸರಿಸಿದ್ದು, ಬಿಜೆಪಿ ಜೊತೆ ಸೇರಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ದೇವೇಂದ್ರ ಫಡ್ನವಿಸ್  ಅವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ಇತ್ತ ಸುದ್ದಿಗೋಷ್ಠಿ ನಡೆಸಿದ ಅಜಿತ್ ಪವಾರ್ ನಿರ್ಧಾರಕ್ಕೂ ಎನ್‍ಸಿಪಿಗೂ ಯಾವುದೇ ಸಂಬಂಧವಿಲ್ಲ. ಅದು ಹೇಗೆ ಬಹುಮತ ಸಾಬೀತು ಮಾಡ್ತಾರೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಸವಾಲ್ ಹಾಕಿದ್ದಾರೆ.

1987ರಲ್ಲಿ ಕಾಂಗ್ರೆಸ್(ಯು) ಕಾಂಗ್ರೆಸ್ ನಲ್ಲಿ ವಿಲೀನವಾಯ್ತು. 1988, 1990ರಲ್ಲಿ ಮತ್ತೆ ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. 1999ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದನ್ನು ಪ್ರಶ್ನಿಸಿ ಶರದ್ ಪವಾರ್ ಪಕ್ಷದಿಂದ ಹೊರ ಬಂದಿದ್ದರು. ಪಿಎ ಸಂಗ್ಮಾ, ತರೀಖ್ ಅನ್ವರ್ ಸೇರಿ ಎನ್‍ಸಿಪಿ ರಚನೆ ಮಾಡಿ, ಪಕ್ಷದ ಅಧ್ಯಕ್ಷರಾದರು.

SCROLL FOR NEXT