ದೇಶ

ಇದು ಬಿಜೆಪಿಯ ಹೊಸ ಆಟ, ಸರ್ಕಾರ ರಚನೆಯೇ ನಮ್ಮ ಗುರಿ: ಜಂಟಿ ಸುದ್ದಿಗೋಷ್ಟಿಯಲ್ಲಿ ಶರದ್ ಪವಾರ್ 

Raghavendra Adiga

ಮುಂಬೈ: ಮಹಾರಾಷ್ಟ್ರ ರಾಜಕೀಯದ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್ ತುರ್ತಾಗಿ ಜಂಟಿ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪವಾರ್ ತಮ್ಮ ಪಕ್ಷದ 10-12 ಶಾಸಕರು ಮಾತ್ರ ಅಜಿತ್ ಪವಾರ್ ಜತೆಸೇರಿ ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎಂದರು.

"ಎರಡೂ ಪಕ್ಷಗಳ ಎಲ್ಲಾ ಚುನಾಯಿತ ಶಾಸಕರು ಸರ್ಕಾರ ರಚನೆಗೆ ಒಪ್ಪಿಗೆ ನೀಡಿದ್ದರು. ಈಗ ಬಿಜೆಪಿಯೊಂದಿಗೆ ಕೈಜೋಡಿಸಲು ಬಯಸುವವರು ಪಕ್ಷಾಂತರ ವಿರೋಧಿ ಕಾನೂನನ್ನು ನೆನಪಿಸಿಕೊಳ್ಳಬೇಕಿದೆ" ಅವರು ಹೇಳಿದ್ದಾರೆ.

"ಅಜಿತ್ ಪವಾರ್ ಅವರ ನಿರ್ಧಾರವು ಪಕ್ಷದ  ನಿಲುವಿಗೆ  ವಿರುದ್ಧವಾಗಿದೆ ಮತ್ತು ವಿವೇಚನಾರಹಿತವಾಗಿದೆ ಯಾವುದೇ ಎನ್‌ಸಿಪಿ ನಾಯಕ ಅಥವಾ ಕಾರ್ಯಕರ್ತ ಎನ್‌ಸಿಪಿ-ಬಿಜೆಪಿ ಸರ್ಕಾರದ ಪರವಾಗಿಲ್ಲ" ಎಂದು ಪವಾರ್ ಹೇಳಿದ್ದಾರೆ.

"ನಾವು ಸರ್ಕಾರವನ್ನು ರಚಿಸಲು ಸಂಖ್ಯಾಬಲ ಹೊಂದಿದ್ದೇವೆ.  ಹಲವಾರು ಸ್ವತಂತ್ರ ಶಾಸಕರು ನಮ್ಮೊಂದಿಗೆ ಇದ್ದರು ಮತ್ತು ಕಾಂಗ್ರೆಸ್, ಎನ್‌ಸಿಪಿ ಮತ್ತು ಸೇನಾಸುಮಾರು 170 ರಷ್ಟು ಶಾಸಕರ ಬೆಂಬಲ ಹೊಂದಿತ್ತು.  ಸೇನಾ ನಾಯಕತ್ವದಲ್ಲಿ ನಾವು ಸರ್ಕಾರವನ್ನು ರಚಿಸಲು ಬಯಸುತ್ತೇವೆ ಮತ್ತು ನಾವು ಇದನ್ನು ಮಾಡಲಿದ್ದೇವೆ."

"ಅಜಿತ್ ಜತೆಸೇರಿ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿರುವುದು ಬಿಜೆಪಿಯ ಹೊಸ ಆಟವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಬಿಜೆಪಿಯ ದೇವೇಂದ್ರ ಫಡ್ನವೀಸ್ ಶನಿವಾರ ಬೆಳಿಗ್ಗೆ ಸತತ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಎನ್‌ಸಿಪಿಯ ಅಜಿತ್ ಪವಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗಿನಿಂದಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಕ್ತಾಯವಾಗಿದೆ.

SCROLL FOR NEXT