ದೇಶ

ಮಹಾ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್, ಎನ್ ಸಿಪಿ, ಶಿವಸೇನಾ ಅರ್ಜಿ, ಇಂದೇ ಸುಪ್ರೀಂನಿಂದ ವಿಚಾರಣೆ

Lingaraj Badiger

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾತ್ರೋರಾತ್ರಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಸರ್ಕಾರ ರಚನೆಗೆ ಅವಕಾಶ ನೀಡಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರ ವಿರುದ್ಧ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಭಾನುವಾರ ವಿಚಾರಣೆ ನಡೆಸಲಿದೆ.

ಇಂದು ರಾತ್ರಿ ಮೂರು ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದ್ದು, ನಾಳೆ ಬೆಳಗ್ಗೆ 11.30ಕ್ಕೆ ವಿಚಾರಣೆ ನಿಗದಿಪಡಿಸಿದೆ.

ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರ ನಿರಂಕುಶ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆ, ಅವರ ಈ ನಿರ್ಧಾರ ಸಂವಿಧಾನಬಾಹಿರ ಎಂದು ಹೇಳಿವೆ. ಅಲ್ಲದೆ ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರು ಬಹುಮತ ಸಾಬೀತುಪಡಿಸಲು ಒಂದು ವಾರ ಕಾಲಾವಕಾಶ ನೀಡುವುದು ಕಾನೂನು ಬಾಹಿರವಾಗಿದ್ದು, ಇದು ಶಾಸಕರ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ 24 ಗಂಟೆಯಲ್ಲಿ ಬಹುಮತ ಸಾಬೀತಪಡಿಸುವಂತೆ ಸೂಚಿಸಬೇಕು ಎಂದು ಮೂರು ಪಕ್ಷಗಳು ಮನವಿ ಮಾಡಿವೆ.

ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕೆ 40 ಸ್ಥಾನಗಳ ಕೊರತೆ ಇದ್ದರೂ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ, ನವೆಂಬರ್ 10ರಂದು ಸರ್ಕಾರ ರಚಿಸುವಂತೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿತ್ತು. ಆಗ, ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯೆ ಇಲ್ಲದ ಕಾರಣ, ಸರ್ಕಾರ ರಚನೆಯಿಂದ ಹಿಂದೆ ಸರಿದಿತ್ತು. ಸರ್ಕಾರ ರಚನೆಗೆ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಇದ್ದರೂ, ಬಹುಮತ ಇಲ್ಲದ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇಂದು ಬೆಳಗ್ಗೆ ದೇವೇಂದ್ರ ಫಡ್ನವಿಸ್ ಅವರು ರಾಜ್ಯದ 19 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮುಖ್ಯಮಂತ್ರಿ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು.

ಈ ಮೊದಲು ಶಿವಸೇನೆ, ಕಾಂಗ್ರೆಸ್, ಎನ್ ಸಿ ಪಿ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿತ್ತು. ಇದಕ್ಕಾಗಿ ಎಲ್ಲಾ ಮಾತುಕತೆ, ವೇದಿಕೆ ಕೂಡ ಸಿದ್ಧವಾಗಿತ್ತು. ಇನ್ನೇನು ರಾಜ್ಯಪಾಲರನ್ನು ಭೇಟಿ ಮಾಡಿ ಅನುಮತಿ ಪಡೆದು ಹೊಸ ಸರ್ಕಾರ ರಚನೆಯ ಉಮೇದಿನಲ್ಲಿದ್ದ ಉದ್ಧವ ಠಾಕ್ರೆ ಅವರಿಗೆ ಈ ಬೆಳವಣಿಗೆ ಅತ್ಯಂತ ನಿರಾಸೆ ತಂದಿದೆ.

SCROLL FOR NEXT