ದೇಶ

ಮಹಾ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ ಡಿಸಿಎಂ ಅಜಿತ್ ಪವಾರ್

Lingaraj Badiger

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾನುವಾರ ತಡ ರಾತ್ರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

ನಾನು ಈಗಲೂ ಎನ್ ಸಿಪಿಯಲ್ಲಿಯೇ ಇದ್ದೇನೆ. ಮುಂದೆಯೂ ಎನ್ ಸಿಪಿಯಲ್ಲಿಯೇ ಇರುತ್ತೇನೆ. ಶರದ್ ಪವಾರ್ ನಮ್ಮ ನಾಯಕರು ಎಂದು ಟ್ವೀಟ್ ಮಾಡಿದ ಬಳಿಕ ಅಜಿತ್ ಪವಾರ್ ಈಗ ಮಹಾ ಸಿಎಂ ಮನೆಗೆ ಆಗಮಿಸಿದ್ದು, ನಾಳೆ ಸುಪ್ರೀಂ ಕೋರ್ಟ್ ನೀಡಬಹುದಾದ ತೀರ್ಪಿನ ಬಗ್ಗೆ ಮತ್ತು ಬಹುಮತ ಸಾಬೀತುಪಡಿಸುವ ಬಗ್ಗೆ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಜಿತ್ ಪವಾರ್ ಸರಣಿ ಟ್ವೀಟ್ ಮಾಡಿ, ಶರದ್‌ ಪವಾರ್ ಎಂದಿಗೂ ತಮ್ಮ ನಾಯಕರಾಗಿರುತ್ತಾರೆ. ತಾವು ಎನ್‌ಸಿಪಿಯಲ್ಲೇ ಇರುವುದಾಗಿ ಹೇಳಿದ್ದಾರೆ.

ಬಿಜೆಪಿಗೆ ಬೆಂಬಲ ನೀಡಿರುವ ಕುರಿತು ಸಮರ್ಥಿಸಿಕೊಂಡಿರುವ ಅವರು, ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಸ್ಥಾಪನೆ ಅಗತ್ಯವಿರುವುದರಿಂದ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಮುಂದಿನ ಐದು ವರ್ಷ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಬಡವರ, ರೈತರ, ಹಿಂದುಳಿದವರ ಮತ್ತು ಇಡೀ ಮಹಾರಾಷ್ಟ್ರ ಅಭಿವೃದ್ಧಿ ಪರವಾಗಿ ಕೆಲಸ ಮಾಡಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. 

ಇನ್ನು ಅಜಿತ್ ಪವಾರ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಕೂಟ ಸರ್ಕಾರ ರಚಿಸುವ ಒಮ್ಮತದ ನಿರ್ಧಾರ ಕೈಗೊಂಡಿವೆ. ಅಜಿತ್ ಪವಾರ್ ಹೇಳಿಕೆ ತಪ್ಪು ಮತ್ತು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶರದ್ ಪವಾರ್ ಅವರು ಟ್ವೀಟ್ ಮಾಡಿದ್ದರು.

SCROLL FOR NEXT