ದೇಶ

ಮಹಾರಾಷ್ಟ್ರ ಜನತೆಗೆ ಸ್ಥಿರ ಸರ್ಕಾರದ ಭರವಸೆ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಅಜಿತ್ ಪವಾರ್ 

Nagaraja AB

ಮುಂಬೈ: ಮಹಾರಾಷ್ಟ್ರ ಜನರ ಪರ ಶ್ರಮಿಸುವುದಾಗಿ  ಭರವಸೆ ನೀಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್,  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಶರದ್ ಪವಾರ್ ಅವರ ಸಂಬಂಧಿಯಾಗಿರುವ ಅಜಿತ್ ಪವಾರ್ ಬಿಜೆಪಿಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಎನ್ ಸಿಪಿಯ ಮೂಲಗಳಿಂದ ತಿಳಿದುಬಂದಿದೆ. 

ಅಜಿತ್ ಪವಾರ್ ಕೂಡಾ ತಮ್ಮ ಟ್ವೀಟರ್ ಖಾತೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಎನ್ ಸಿಪಿ ಮುಖಂಡ ಎಂದು ಬದಲಾಯಿಸಿಕೊಂಡಿದ್ದಾರೆ. ಈಗಲೂ ಕೂಡಾ ಎನ್ ಸಿಪಿಯಲ್ಲಿಯೇ ಇದ್ದೇನೆ. ಮುಂದೆಯೂ ಕೂಡಾ ಎನ್ ಸಿಪಿಯಲ್ಲಿಯೇ ಇರುತ್ತೇನೆ. ಶರದ್ ಪವಾರ್ ನಮ್ಮ ನಾಯಕರು ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ಅಚ್ಚರಿಯ ರೀತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಜಿತ್ ಪವಾರ್, ಥ್ಯಾಕ್ಯೂ ಯು ನರೇಂದ್ರ ಮೋದಿ ಜಿ. ಸುಭದ್ರ ಸರ್ಕಾರ ನೀಡಿ , ಜನರ ಒಳಿತಿಗಾಗಿ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ರಾಜನಾಥ್ ಸಿಂಗ್, ಪಿಯೂಷ್ ಗೋಯೆಲ್, ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಮತ್ತಿತರ ನಾಯಕರುಗಳಿಗೂ ಧನ್ಯವಾದ ಹೇಳಿದ್ದಾರೆ. 

ಇದಕ್ಕೂ ಮುನ್ನ, ತಮ್ಮ ನಿರ್ಧಾರವನ್ನು ಬದಲಾಯಿಸುವಂತೆ ಎನ್ ಸಿಪಿ ಮುಖಂಡ ಜಯಂತ್ ಪಾಟೀಲ್ ಹಾಗೂ ದಿಲೀವ್ ವಾಲ್ಸೆ ಪಾಟೀಲ್ ಅಜಿತ್ ಪವಾರ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಅಜಿತ್ ಪವಾರ್ ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. 

SCROLL FOR NEXT