ದೇಶ

'ಮಹಾ' ಡ್ರಾಮಾ: ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಯತ್ನ- ಸಿಎಂ ಸ್ಥಾನ ಹಂಚಿಕೆಗೆ ಶಿವಸೇನೆ ಒಪ್ಪಿಗೆ

Manjula VN

ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ಹೈ ಡ್ರಾಮಾ ನಡೆಯುತ್ತಿದ್ದು, ಬಿಜೆಪಿಯನ್ನು ಹೇಗಾದರೂ ಅಧಿಕಾರದಿಂದ ದೂರ ಇಡಲು ನಿರ್ಧರಿಸಿರುವ ಶಿವಸೇನೆ, ಈಗಾಗಲೇ ಬಿಜೆಪಿ ಜೊತೆಗೆ ಕೈಜೋಡಿಸಿರುವ ಅಜಿತ್ ಪವಾರ್ ಅವರನ್ನು ಸೆಳೆಯಲು ಯತ್ನ ನಡೆಸುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು 2.5 ವರ್ಷಗಳ ಕಾಲ ಹಂಚಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಹಿಂದೆ ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ದೇವೇಂದ್ರ ಫಡ್ನವೀಸ್ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 

ಇದೀಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಶತಾಯಗತಾಯ ಯತ್ನ ನಡೆಸಿರುವ ಶಿವಸೇನೆ, ಎನ್'ಸಿಪಿ ಜೊತೆಗೆ ಎರಡೂ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳಲು ಸಿದ್ಧ ಎಂದು ಹೇಳಿದೆ ಎಂದು ತಿಳಿದುಬಂದಿದೆ. 
 
ಅತ್ಯಂತ ಅಪರೂಪ ಎಂಬಂತೆ ರಜಾದಿನವಾದ ಭಾನುವಾರ ಮೂರು ಪಕ್ಷಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎನ್.ವಿ.ರಮಣ ಅವರ ನೇತೃತ್ವದ ನ್ಯಾಯಪೀಠ ಕೈಗೆತ್ತಿಗೊಂಡಿತ್ತು. 

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್'ಸಿಪಿ ಬಂಡಾಯ ಶಾಸಕರಿಗೆ ಸರ್ಕಾರ ರಚನೆಗೆ ಅವಕಾಶವಿತ್ತ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಭಾನುವಾರ ನಡೆಸಿದ ಸುಪ್ರೀಂಕೋರ್ಟ್, ಫಡ್ನವೀಸ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ಪತ್ರ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಫಡ್ನವೀಸ್ ಅವರಿಗೆ ಸರ್ಕಾರ ರಚಿಸಲು ನೀಡಿದ ಆಹ್ವಾನ ಪತ್ರವನ್ನು ಸೋಮವಾರ ಬೆಳಿಗ್ಗೆ 10.30ಕ್ಕೆ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಸೂಚಿಸಿತ್ತು. 

ಆದರೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ 24 ತಾಸಿನೊಳಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಹುಮತ ಸಾಬೀತುಪಡಿಸಬೇಕು ಎಂದು ಶಿವಸೇನೆ-ಎನ್'ಸಿಪಿ-ಕಾಂಗ್ರೆಸ್ ಮಾಡಿಕೊಂಡ ಮನವಿಯನ್ನು ಕೂಡಲೇ ಪುರಸ್ಕರಿಸಲು ನಿರಾಕರಿಸಿದೆ. ಹೀಗಾಗಿ ಫಡ್ನವೀಸ್ ಅವರು ಬಹುಮತ ಯಾವಾಗ ಸಾಬೀತುಪಡಿಸಬೇಕು ಎಂಬ ಆದೇಶವನ್ನು ಸೋಮವಾರ ಕೋರ್ಟ್ ಪ್ರಕಟಿಸುವ ಸಾಧ್ಯತೆಗಳಿವೆ. 

SCROLL FOR NEXT