ದೇಶ

ವ್ಯಾಪಂ ಹಗರಣ: ಓರ್ವನಿಗೆ 10 ವರ್ಷ, ಇತರೆ 30 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ

Lingaraj Badiger

ಭೋಪಾಲ್: ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಧ್ಯ ಪ್ರದೇಶದಲ್ಲಿ ನಡೆದ ಬಹುಕೋಟಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಓರ್ವನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಇತರೆ 30 ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಭೋಪಾಲ್ ಸಿಬಿಐ ಕೋರ್ಟ್ ಸೋಮವಾರ ತೀರ್ಪು ನೀಡಿದೆ.

ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ನಡೆಸಿದ ಪ್ರವೇಶ ಮತ್ತು ನೇಮಕಾತಿ ವೇಳೆ ನಡೆದ ಅಕ್ರಮಗಳಲ್ಲಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳು ಸಹ ಭಾಗಿಗಳಾಗಿದ್ದರು.

2013ರಲ್ಲಿ ಬೆಳಕಿಗೆ ಬಂದ ಈ ಹಗರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಎಸ್ ಬಿ ಸಾಹು ಅವರು, ಅಪರಾಧಿ ಪ್ರದೀಪ್ ತ್ಯಾಗಿ(29)ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಸತೀಶ್ ದಿನಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.

2013ರ ಪೊಲೀಸ್ ಪೇದೆ ನೇಮಕಾತಿ ವೇಳೆ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದ ಇತರೆ 30 ಮಂದಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 91 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ ಎಂದು ದಿನಕರ್ ಹೇಳಿದ್ದಾರೆ.

ವ್ಯಾಪಂ ನಡೆಸಿದ್ದ 13 ವಿವಿಧ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲಾಗಿದೆ. ಆಹಾರ ಪರೀಕ್ಷಕರು, ಸಂಚಾರಿ ಪೋಲೀಸರು,  ಪೊಲೀಸ್ ಸಿಬ್ಬಂದಿ, ಶಾಲಾ ಶಿಕ್ಷಕರು, ಡೈರಿ ಅಧಿಕಾರಿಗಳು, ಅರಣ್ಯ ರಕ್ಷಕ ಸೇರಿ ಅನೇಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದಿದ್ದ ಪರೀಕ್ಷೆಯಲ್ಲಿ ಹಗರಣ ನಡೆದಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

SCROLL FOR NEXT