ದೇಶ

ಮುಂಬೈ ಹೋಟೆಲ್ ನಲ್ಲಿ ಸೇನಾ, ಕಾಂಗ್ರೆಸ್, ಎನ್ ಸಿಪಿ ಶಾಸಕರ ಪರೇಡ್, ನಾವು 162 ಎಂದು ಮಾಧ್ಯಮದ ಮುಂದೆ ಶಕ್ತಿ ಪ್ರದರ್ಶನ

Lingaraj Badiger

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸೋಮವಾರ ಶಿವಸೇನಾ, ಎನ್​ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಶಾಸಕರ ಪರೇಡ್ ನಡೆಸುವ ಮೂಲಕ ಮಾಧ್ಯಮದ ಮುಂದೆ ಶಕ್ತಿ ಪ್ರದರ್ಶಿಸಿವೆ.

ಈ ಮೂರು ಪಕ್ಷಗಳು ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಬೇಕು ಎನ್ನುವಷ್ಟರಲ್ಲಿ ಬಿಜೆಪಿಯೂ ಅಜಿತ್ ಪವಾರ್ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಆದರೆ  ಬಿಜೆಪಿ ಬಹುಮತ ಇಲ್ಲದೆ, ಸರ್ಕಾರ ರಚಿಸಿದೆ. ನಮ್ಮ ಬಳಿ ಮೂರು ಪಕ್ಷಗಳಿಂದ ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲವಿದೆ ಎಂದು ಶಿವಸೇನೆ ಹೇಳಿಕೊಂಡಿದೆ. 

ಈ ಮಧ್ಯೆ ಮೂರು ಪಕ್ಷಗಳು ಇಂದು ಸಂಜೆ ತಮ್ಮ ಶಾಸಕರನ್ನು ಗ್ರ್ಯಾಂಡ್ ಹಯಾಟ್ ಹೋಟೆಲ್​ನಲ್ಲಿ ಸೇರಿಸಿ, ಮಾಧ್ಯಮಗಳ ಮುಂದೆ ಒಗ್ಗಟ್ಟು ಪ್ರದರ್ಶಿಸಿವೆ. ಅಲ್ಲದೆ ನಾವು 162 ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ಕಾರ ರಚನೆಗೆ ಬೇಕಾದ ಬಹುಮತ  ನಮ್ಮ ಬಳಿ ಇದೆ ಎಂದು ಘೋಷಿಸಿದರು. ಮಹಾವಿಕಾಸ್ ಅಗ್ಹಾಡಿ ದೀರ್ಘ ಕಾಲ ಉಳಿಯಲಿ ಎಂದು ಘೋಷಣೆ ಮೊಳಗಿಸಿದರು.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಮಗಳು ಸುಪ್ರಿಯಾ ಸುಳೆ, ಕಾಂಗ್ರೆಸ್​ನ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಚೌಹಾಣ್, ಶಿವಸೇನೆಯ ಉದ್ಧವ್ ಠಾಕ್ರೆ, ಸಂಜಯ್ ರಾವತ್ ಸೇರಿ ಮೂರು ಪಕ್ಷಗಳ ಶಾಸಕರು ಗ್ರಾಂಡ್ ಹಯಾತ್ ಹೋಟೆಲ್​ಗೆ ಆಗಮಿಸಿದ್ದರು.

ಈ ಮಧ್ಯೆ ರಾತ್ರೋರಾತ್ರಿ ಬಿಜೆಪಿಗೆ ಸರ್ಕಾರ ಅವಕಾಶ ನೀಡಿದ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಈ ಮೂರು ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಭಾನುವಾರ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ನಾಳೆ ತೀರ್ಪು ಪ್ರಕಟಗೊಳ್ಳಲಿದೆ.

SCROLL FOR NEXT