ದೇಶ

ಮಹಾ ಬಿಜೆಪಿ ಸರ್ಕಾರ ಪತನ ಸಂವಿಧಾನ ದಿನಕ್ಕೆ ಅತ್ಯುತ್ತಮ ಗಿಫ್ಟ್: ಮಮತಾ ಬ್ಯಾನರ್ಜಿ

Lingaraj Badiger

ಕೋಲ್ಕತಾ: ಮಹಾರಾಷ್ಟ್ರದಲ್ಲಿ ಬಿಜೆಪಿ ಸಂವಿಧಾನವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಸರ್ಕಾರ ರಚಿಸಿತ್ತು ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ದೇವೇಂದ್ರ ಫಡ್ನವಿಸ್ ರಾಜೀನಾಮೆ ಸಂವಿಧಾನವನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.

ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇಂದು ಸಂವಿಧಾನವನ್ನು ಎತ್ತಿಹಿಡಿದಿದೆ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಪತನ ಈ ಸಂವಿಧಾನ ದಿನಕ್ಕೆ ಅತ್ಯುತ್ತಮ ಉಡುಗೊರೆ ಎಂದರು.

ಬಹುಮತ ಇಲ್ಲದ ಮೇಲೆ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲೇ ಬಾರದಿತ್ತು. ಬಹುಮತವಿಲ್ಲದೇ ಸರ್ಕಾರ ರಚಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ. ಆದರೆ, ದೇವೇಂದ್ರ ಫಡ್ನವಿಸ್ ಅವರು ಇಂದೇ ರಾಜೀನಾಮೆ ಸಲ್ಲಿಸುವ ಮೂಲಕ ಉತ್ತಮ ನಡೆ ಅನುಸರಿಸಿದ್ದಾರೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲವೇ ಇರಲಿಲ್ಲ. ಆತುರಕ್ಕೆ ಬಿದ್ದು ಸರ್ಕಾರ ರಚಿಸಲು ಹೋಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಯಿತು ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

SCROLL FOR NEXT