ದೇಶ

ಲೋಕಸಭೆಯಲ್ಲೂ ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕೊಂಡಾಡಿದ ಬಿಜೆಪಿ ಸಂಸದೆ!

Lingaraj Badiger

ನವದೆಹಲಿ: ಕಳೆದ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿ ಭೋಪಾಲ್ ಸಂಸದೆ ಪ್ರಗ್ಯಾ ಠಾಕೂರ್ ಈಗ ಲೋಕಸಭೆಯಲ್ಲೂ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕೊಂಡಾಡಿದ್ದಾರೆ.

ಇಂದು ಲೋಕಸಭೆಯಲ್ಲಿ ಎಸ್​ಪಿಜಿ(ತಿದ್ದುಪಡಿ) ಕಾಯ್ದೆ ಮೇಲಿನ ಚರ್ಚೆ ವೇಳೆ ಡಿಎಂಕೆ ಸಂಸದ ಎ ರಾಜಾ ಅವರು ಗೋಡ್ಸೆ ಮಹಾತ್ಮ ಗಾಂಧಿಯನ್ನು ಏಕೆ ಕೊಂದರು ಎಂದು ವಿವರಿಸಿದಾಗ, ದೇಶಭಕ್ತರನ್ನು ನೀವು ಉದಾಹರಣೆಯಾಗಿ ಕೊಡಬೇಡಿ ಎಂದು ಪ್ರಗ್ಯಾ ಠಾಕೂರ್, ರಾಜಾ ಅವರಿಗೆ ಹೇಳಿದರು.

ಗೋಡ್ಸೆ 32 ವರ್ಷಗಳಿಂದಲೂ ಗಾಂಧೀಜಿ ಮೇಲೆ ದ್ವೇಷ ಸಾಧಿಸುತ್ತಾ ಕೊನೆಗೆ ಹತ್ಯೆಗೈಯಲು ತಾನೇ ನಿರ್ಧರಿಸಿದ್ದ. ಗೋಡ್ಸೆ ಹೊಂದಿದ್ದ ಪ್ರತ್ಯೇಕ ಸಿದ್ಧಾಂತದಿಂದಾಗಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಸಂಸದ ಎ.ರಾಜಾ ಹೇಳಿದರು. ಈ ವೇಳೆ ಪ್ರಗ್ಯಾ ಠಾಕೂರ್ ಮಧ್ಯೆ ಪ್ರವೇಶಿಸಿ, ಗೋಡ್ಸೆ ಒಬ್ಬ ದೇಶಭಕ್ತ ಅವರನ್ನು ಉದಾಹರಣೆಯಾಗಿ ಕೊಡಬೇಡಿ ಎಂದರು. 

ಬಿಜೆಪಿ ಸಂಸದೆಯ ಈ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದರು. 

ಪ್ರಗ್ಯಾ ಠಾಕೂರ್ ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವುದು ಇದೇ ಮೊದಲೇನಲ್ಲ. ಮಾಲೆಂಗಾವ್ ಸ್ಫೋಟ ಪ್ರಕರಣ ಆರೋಪಿಯಾಗಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಠಾಕೂರ್ ಅವರು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಗೋಡ್ಸೆಯನ್ನು ನಿಜವಾದ ದೇಶಭಕ್ತ ಎಂದು ಕರೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಗ್ಯಾ ಠಾಕೂರ್ ಹೇಳಿಕೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಗಾಂಧೀಜಿ ಬಗ್ಗೆಯಾಗಲಿ ಅಥವಾ ನಾಥೂರಾಮ್ ಗೋಡ್ಸೆ ಬಗ್ಗೆಯಾಗಲಿ ಟೀಕೆ ಮಾಡುವುದು ಅದು ತುಂಬಾ ಕೆಟ್ಟದ್ದು, ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತೆ. ಪ್ರಗ್ಯಾ ಠಾಕೂರ್ ಈಗಾಗಲೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಆದರೆ, ಅವರನ್ನು ನಾನು ಪೂರ್ಣಪ್ರಮಾಣದಲ್ಲಿ ಕ್ಷಮಿಸಲ್ಲ ಎಂದು ಹೇಳಿದ್ದರು.

SCROLL FOR NEXT