ದೇಶ

ನಾಳೆ ಉದ್ಧವ್ ಠಾಕ್ರೆ ವಿಶ್ವಾಸಮತಯಾಚನೆ ಸಾಧ್ಯತೆ, ಗೆಲ್ಲುವ ವಿಶ್ವಾಸದಲ್ಲಿ ಸೇನಾ, ಎನ್ ಸಿಪಿ, ಕಾಂಗ್ರೆಸ್

Lingaraj Badiger

ಮುಂಬೈ: ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವ ಸಾಧ್ಯತೆ ಇದ್ದು, ಮಹಾ ವಿಕಾಸ ಅಘಾಡಿ(ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್) ಮೈತ್ರಿಕೂಟ ವಿಶ್ವಾಸಮತ ಗೆಲ್ಲುವ ವಿಶ್ವಾಸದಲ್ಲಿವೆ.

ನಾಳೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಎನ್ ಸಿಪಿ ಶಾಸಕ ದಿಲಿಪ್ ವಲ್ಸೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಶುಕ್ರವಾರ ನೇಮಕ ಮಾಡಲಾಗಿದೆ.

ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಶಾಸಕ ಅಬ್ದುಲ್ ಸತ್ತಾರ್, ಸಿಎಂ ಉದ್ಧವ್ ಠಾಕ್ರೆ ಅವರು ನಾಳೆ ವಿಶ್ವಾಸಮತಯಾಚಿಸುವ ಸಾಧ್ಯತೆ ಇದೆ. ಸದನದಲ್ಲಿ ಬಹುಮತ ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ. ಈ ಮುಂಚೆ ನಾವು 162 ಶಾಸಕರಿದ್ದೆವು. ಈಗ 170 ಶಾಸಕರಾಗಿದ್ದೇವೆ ಮತ್ತು ನಮ್ಮ ಶಾಸಕರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ನಮ್ಮ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ನಾಯಕ ಉದ್ಧವ್ ಠಾಕ್ರೆ ಅವರು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

SCROLL FOR NEXT