ದೇಶ

ಗುಜರಾತ್'ನಲ್ಲಿ ಭೀಕರ ಬಸ್ ಅಪಘಾತ: 21 ಸಾವು, 53 ಜನರಿಗೆ ಗಾಯ

Manjula VN

ನವದೆಹಲಿ: ಉತ್ತರ ಗುಜರಾತ್"ನ ಬನಸ್ಕಾಂತ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. 

ಗುಡ್ಡಗಾಡು ಪ್ರದೇಶವಾಗಿರುವ ತ್ರಿಶುಲ್ಯಾ ಘಾಟ್ ಬಳಿಯಿರುವ ಅಂಬಾಜಿ-ದಂತಾ ರಸ್ತೆ ನಡುವೆ ಬರುವ ಅಂಬಾಜಿ ಟೌನ್ ಬಳಿ ಅಪಘಾತ ಸಂಭವಿಸಿದೆ. ಅಂಬಾಜಿ ದೇಗುಲಕ್ಕೆ ಭೇಟಿ ನೀಡಿದ್ದ ಜನರು ಬಸ್ ನಲ್ಲಿ ತಮ್ಮ ತಮ್ಮ ಮನೆಗಳಿಗೆ ವಾಪಾಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ.

ತ್ರಿಶುಲ್ಯಾ ಘಾಟ್ ಬಳಿ ಹೆಚ್ಚು ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಚಾಲಕ ಬಸ್ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಬಸ್ ಅಪಘಾತಕ್ಕೀಡಾಗಿದೆ. ಬಸ್ ನಲ್ಲಿ ಒಟ್ಟು 70 ಮಂದಿ ಪ್ರಯಾಣಿಕರಿದ್ದರು ಎಂದು ಬನಸ್ಕಾಂತ ಜಿಲ್ಲೆಯ ಎಸ್"ಪಿ ಅಜಿತ್ ರಜಿಯಾನ್ ಹೇಳಿದ್ದಾರೆ. 

ಘಟನೆಯಲ್ಲಿ 21ಮಂದಿ ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಗಾಯಗೊಂಡಿರುವ 53 ಮಂದಿಯ ಪೈಕಿ 35 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದಂತಾ ಟೌನ್ ಆಸ್ಪತ್ರೆ ಹಾಗೂ ಪಲಂಪುರ್ ನಾಗರೀಕ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಎರಡೂ ಆಸ್ಪತ್ರೆಗಳಲ್ಲಿ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆಗಳೂ ಕೂಡ ನಡೆಯುತ್ತಿವೆ. ಘಟನೆಯಲ್ಲಿ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರೂ ಆನಂದ್ ತಾಲೂಕಿನ ಅಂಕ್ಲಾವ್ ಗ್ರಾಮಸ್ಥರಾಗಿದ್ದಾರೆಂದಿದ್ದಾರೆ.
  
ಘಟನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. 
 
ದುರ್ಘಟನೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಅಪಘಾತದಲ್ಲಿ ಸಾವನ್ನಪ್ಪಿರುದವರ ಕುರಿತು ಸಾಕಷ್ಟು ಬೇಸರವಾಗಿದೆ. ಮೃತರ ಕುಟುಂಬಕ್ಕೆ ಸಂತಾಪ  ಸೂಚಿಸುತ್ತೇನೆ. ಗಾಯಾಳುಗಳಿಗೆ ಸ್ಥಳೀಯ ಆಡಳಿತ ಮಂಡಳಿ ಎಲ್ಲಾ ರೀತಿಯ ನೆರವುಗಳನ್ನು ನೀಡುತ್ತಿದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ. 

SCROLL FOR NEXT