ದೇಶ

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ 144 ಅಪ್ರಾಪ್ತರ ಬಂಧನ: ನ್ಯಾಯಾಂಗ ವರದಿ

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ 144 ಅಪ್ರಾಪ್ತರನ್ನು ಬಂಧಿಸಲಾಗಿತ್ತು ಮತ್ತು ನಂತರ 144 ಅಪ್ರಾಪ್ತರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ ಬಾಲಾಪರಾಧಿ ನ್ಯಾಯ ಸಮಿತಿ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಬಂಧಿತ ಇನ್ನು ಇಬ್ಬರು ಅಪ್ರಾಪ್ತರನ್ನು ಬಾಲಾಪರಾಧಿಗಳ ಪುನಶ್ಚೇತನ ಕೇಂದ್ರದಲ್ಲಿಡಲಾಗಿದೆ ಎಂದು ಸಮಿತಿ ನಿನ್ನೆ ಸುಪ್ರೀಂ ಕೋರ್ಟ್ ಗೆ ನೀಡಿದ ವರದಿಯಲ್ಲಿ ತಿಳಿಸಿದೆ.

ಆಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ 144 ಅಪ್ರಾಪ್ತರನ್ನು ಬಂಧಿಸಲಾಗಿದ್ದು, ಈ ಪೈಕಿ 9ರಿಂದ 11 ವರ್ಷದ ಮಕ್ಕಳೂ ಇದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿರುವುದಾಗಿ ಸಮಿತಿ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.

ಕಲ್ಲೆಸೆತ, ದಂಗೆ, ಸಾರ್ವಜನಿಕ ಮತ್ತು ಖಾಸಗಿ ಸೊತ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಈ ಅಪ್ರಾಪ್ತರನ್ನು ಬಂಧಿಸಲಾಗಿದ್ದು, ಅವರನ್ನು ಬಾಲಾಪರಾಧಿಗಳ ಪುನಶ್ಚೇತನ ಕೇಂದ್ರದಲ್ಲಿಡಲಾಗಿದೆ.

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾನೂನು ಬಾಹಿರವಾಗಿ ಮಕ್ಕಳನ್ನು ಬಂಧಿಸುತ್ತಿವೆ ಎಂದು ಆರೋಪಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಏನಾಕ್ಷಿ ಗಂಗೂಲಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್ ವಿ ರಮಣ, ಆರ್ ಸುಭಾಶ್ ರೆಡ್ಡಿ ಮತ್ತು ಬಿಆರ್ ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಈ ಬಗ್ಗೆ ವರದಿ ನೀಡುವಂತೆ ಬಾಲಾಪರಾಧಿ ನ್ಯಾಯ ಸಮಿತಿಗೆ ಸೂಚಿಸಿತ್ತು. ಅದರಂತೆ ಸಮಿತಿ ಮಂಗಳವಾರ ವರದಿ ನೀಡಿದ್ದು, ಕೋರ್ಟ್ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

SCROLL FOR NEXT