ದೇಶ

ಅರೆ ಪ್ರತಿಭಟನೆ: ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ವಶಕ್ಕೆ ಪಡೆದ ಪೊಲೀಸರು

Manjula VN

ಮುಂಬೈ: ಮುಂಬೈನ ಅರೆ ಕಾಲೋನಿಯಲ್ಲಿ ಮೆಟ್ರೋ ಕಾಮಗಾರಿಗಾಗಿ ಸಾವಿರಾರು ಮರಗಳನ್ನು ಕಡಿಯುವ ಬಿಎಂಸಿ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿಯವರನ್ನು ಶನಿವಾರ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಸ್ವತಃ ಪ್ರಿಯಾಂಕಾ ಚತುರ್ವೇದಿಯವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ಅರೆ ಕಾಲೋನಿಗೆ ತೆರಳುತ್ತಿದ್ದ ವೇಳೆ ಮುಖ್ಯ ಪ್ರವೇಶ ಮಾರ್ಗದಲ್ಲಿ ಮುಂಬೈ ಪೊಲೀಸರು ನನ್ನನ್ನು ತಡೆಹಿಡಿದ್ದಾರೆ. ಹ್ಯಾಷ್'ಸೇವ್ ಅರೆ ಎಂದು ಹೇಳಿದ್ದಾರೆ. 

ಸ್ಥಳದಿಂದ ಪೊಲೀಸರು ನನ್ನನ್ನು ಬಲವಂತದಿಂದ ಕರೆದೊಯ್ದದರು. ನಾನು ಕಾನೂನನ್ನು ಉಲ್ಲಂಘನೆ ಮಾಡಿಲ್ಲ. ಕಾರಿನಲ್ಲಿದ್ದ ಪೊಲೀಸರು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆಂಬುದನ್ನೂ ತಿಳಿಸಲಿಲ್ಲ. ಇದು ನಿಜಕ್ಕೂ ಹುಚ್ಚುತನ. ಮುಂಬೈ ಜನತೆಯನ್ನು ಕ್ರಿಮಿನಲ್ ಗಳಂತೆ ಕಾಣಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಮೆಟ್ರೋ3 ಯೋಜನೆ ಹೆಮ್ಮೆಯಿಂದ ಮುನ್ನಡೆಯಬೇಕಿತ್ತು. ಆದರೆ, ರಾತ್ರೋರಾತ್ರಿ ಯೋಜನೆಯ ಕಾರ್ಯಗಳನ್ನು ಆರಂಭಿಸಿರುವುದು, ಪೊಲೀಸರ ಸರ್ಪಗಾವಲಿನೊಂದಿಗೆ ನಡೆಸಿರುವುದು ನಾಚಿಗೇಡುತನ. ಯೋಜನೆಯಿಂದ ಮುಂಬೈ ಸ್ವಚ್ಛಗೊಳ್ಳಬೇಕು. ಆದರೆ, ಸಾವಿರಾರು ಪ್ರಾಣಿಗಳು ನೆಲೆಸಿರುವ ಅರಣ್ಯ ಪ್ರದೇಶಗಳನ್ನು ನಾಶಮಾಡುವ ಮೂಲಕ ಗಾಳಿಯನ್ನು ಮಲಿನಗೊಳಿಸಲಾಗುತ್ತಿದೆ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ. 

ಪ್ರತಿಭಟನಾನಿರತ 29 ಮಂದಿ ಬಂಧನ
ಈ ನಡುವೆ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದ 29 ಜನರನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವರೆಗೂ 6 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 29 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಇದರಲ್ಲಿ ಕೆಲವರು ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT