ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ವಿಧಾನಮಂಡಲ ಉಭಯ ಸದನಗಳ ಪ್ರತಿಪಕ್ಷ ನಾಯಕ ಜವಾಬ್ದಾರಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಜಿಜ್ಞಾಸೆಗೆ ಕಾಂಗ್ರೆಸ್ ಹೈಕಮಾಂಡ್ ನಿಲುಕಿದ್ದು, ಈ ಸಂಬಂಧ ರಾಜ್ಯದ ಹಿರಿಯ ಮುಖಂಡರ ಅಭಿಪ್ರಾಯ ಕ್ರೋಢೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ವಿಧಾನ ಮಂಡಲದ ಎರಡೂ ಸದನಗಳಿಗೆ ಪ್ರತಿಪಕ್ಷದ ನಾಯಕರು, ಶಾಸಕಾಂಗ ಪಕ್ಷದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದ 60ಜನ ಹಿರಿಯ ನಾಯಕರ ಅಭಿಪ್ರಾಯ ಆಲಿಸುವ ಕಾರ್ಯದಲ್ಲಿ ನಿರತವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ನಾಯಕರ ಅಭಿಪ್ರಾಯ ಸಂಗ್ರಹಿಸಲು ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಯೊಬ್ಬ ನಾಯಕರು ಪ್ರತಿ ಹುದ್ದೆಗೆ ಕನಿಷ್ಠ ಮೂವರು ಅರ್ಹರ ಹೆಸರುಗಳನ್ನು ಸೂಚಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.