ದೇಶ

ಜಮ್ಮು-ಕಾಶ್ಮೀರದಲ್ಲಿ 200-300 ಉಗ್ರರು ಸಕ್ರಿಯ, ಮತ್ತಷ್ಟು ಉಗ್ರರ ಒಳನುಸುಳಿಸಲು ಪಾಕ್ ಯತ್ನ!

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಸಿಡಿಮಿಡಿಗೊಂಡಿರುವ ಪಾಕಿಸ್ತಾನ, ಈಗಾಗಲೇ 200-300 ಉಗ್ರರನ್ನು ಗಡಿಯೊಳಗೆ ನುಸುಳಿಸಿದ್ದು, ಮತ್ತಷ್ಟು ಉಗ್ರರನ್ನು ನುಸುಳಿಸಲು ಸತತ ಯತ್ನ ನಡೆಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ. 

ಕಣಿಯಲ್ಲಿ ಉಗ್ರರು ಸಕ್ರಿಯರಾಗಿದ್ದು, 200-300 ಉಗ್ರರು ನೆಲೆಸಿದ್ದಾರೆ. ಭಾರತದ ಗಡಿಯೊಳಗೆ ಮತ್ತಷ್ಟು ಉಗ್ರರನ್ನು ನುಸುಳಿಸಲು ಪಾಕಿಸ್ತಾನ ತನ್ನ ಯತ್ನಗಳನ್ನು ಮುಂದುವರೆಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ, ಗಡಿಯಲ್ಲಿ ಉಗ್ರರನ್ನು ನಿಲ್ಲಿಸಿರುವ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುವ ವೇಳೆ ಭಾರತದ ಗಡಿ ನಸುಳಿಸುತ್ತಿದೆ. ಉಗ್ರರ ನುಸುಳಿವಿಕೆ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿದ ಹೊರತಾಗಿಯೂ ಸಾಕಷ್ಟು ಉಗ್ರರು ಗಡಿ ಪ್ರವೇಶ ಮಾಡಿದ್ದಾರೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 200-300 ಉಗ್ರರು ನುಸುಳಿಸಿದ್ದು, ಈ ಉಗ್ರರು ಯಾವ ಸಂದರ್ಭದಲ್ಲಿ ಬೇಕಿದ್ದರೂ ದಾಳಿ ನಡೆಸಬಹುದು ಎಂದು ಎಚ್ಚರಿಸಿದ್ದಾರೆ. 

ಉಗ್ರರು ಗಡಿ ನುಸುಳಿದ ವೇಳೆ ಸಾಕಷ್ಟು ಬಾರಿ ಎನ್'ಕೌಂಟರ್ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದೇವೆ. ಗುಲ್ಮಾರ್ಗ್ ಸೆಕ್ಟರ್ ಬಳಿ ಇಬ್ಬರು ಪಾಕಿಸ್ತಾನದ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿತ್ತು. ನೆ.29ರಂದು ಗಂದೇರ್ಬಾಲ್ ನಲ್ಲಿ ಸುದೀರ್ಘವಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಸದೆಬಡಿಯಲಾಗಿತ್ತು. ಇನ್ನೂ ಕೆಲವೆಡೆ ಉಗ್ರರು ಅಡಗಿ ಕುಳಿತಿದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

370 ವಿಧಿ ಬಳಿಕ ಕಾಶ್ಮೀರ ಪರಿಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಜಮ್ಮು, ಲೆಹ್ ಹಾಗೂ ಕಾರ್ಗಿಲ್ ನಲ್ಲಿ ಶಾಂತಿಯುತ ವಾತಾವರಣ ನೆಲೆಸಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ. ಶ್ರೀನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಮಾರುಕಟ್ಟೆಗಳು ತೆರೆದಿವೆ. ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ ಎಂದಿದ್ದಾರೆ. 

SCROLL FOR NEXT