ದೇಶ

ಪ್ರವಾಸಿಗರಿಗೆ ಜಮ್ಮು-ಕಾಶ್ಮೀರ ಮುಕ್ತ, ನಿಷೇಧ ಹಿಂತೆಗೆತ: ರಾಜ್ಯಪಾಲ ಸತ್ಯ ಪಾಲ್ ಮಲಿಕ್ 

Sumana Upadhyaya

ಶ್ರೀನಗರ: ಎರಡು ತಿಂಗಳ ಹಿಂದೆ ಕಣಿವೆ ಪ್ರದೇಶವನ್ನು ಪ್ರವಾಸಿಗರು ತೊರೆದು ಹೋಗಬೇಕು ಎಂದು ಹೇರಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ತಿಳಿಸಿದ್ದಾರೆ.


ಈ ತಿಂಗಳ 10ರಿಂದ ಜಾರಿಗೆ ಬರುವಂತೆ ಪ್ರವಾಸಿಗರಿಗೆ ಹೇರಲಾಗಿದ್ದ ನಿಷೇಧವನ್ನು ತೆಗೆಯುವಂತೆ ಗೃಹ ಸಚಿವಾಲಯದಿಂದ ಆದೇಶ ಬಂದಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.


ಕಣಿವೆ ಪ್ರದೇಶಕ್ಕೆ ಕಾಶ್ಮೀರಕ್ಕೆ ಉಗ್ರರ ಬೆದರಿಕೆಯಿದೆಯೆಂದು ಭದ್ರತಾ ಕಾರಣಗಳಿಗೆ ಕಳೆದ ಆಗಸ್ಟ್ 2ರಂದು ರಾಜ್ಯ ಆಡಳಿತ ಆದೇಶ ಹೊರಡಿಸಿ ಅಮರನಾಥ ಯಾತ್ರಿಗರು ಮತ್ತು ಪ್ರವಾಸಿಗರು ಕಾಶ್ಮೀರವನ್ನು ಕೂಡಲೇ ತೊರೆದು ಹೋಗಬೇಕೆಂದು ಸೂಚಿಸಲಾಗಿತ್ತು.
ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸುವ ಮೂರು ದಿನಗಳ ಮುಂಚೆಯಷ್ಟೇ ಈ ಆದೇಶ ಹೊರಡಿಸಲಾಗಿದ್ದು, ಅದಾದ ಬಳಿಕ ಆಗಸ್ಟ್ 5ರಂದು ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿತ್ತು. 


ನಿನ್ನೆ ಪರಿಸ್ಥಿತಿ ಹಾಗೂ ಭದ್ರತೆ ಪರಾಮರ್ಶೆ ಕುರಿತು ಸಲಹೆಗಾರರು ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದಾರೆ.

SCROLL FOR NEXT